ವಸತಿ ಶಾಲಾ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಅಶೋಕ ಪಟ್ಟಣ ಅವರಿಗೆ ವಸತಿ ಶಾಲಾ ವಿಷಯ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಎಂ.ಎಚ್. ಪೂಜೇರ ಅವರ ನೇತೃತ್ವದಲ್ಲಿ ಶಿಕ್ಷಕರು ಮನವಿ ಸಲ್ಲಿಸಿದರು.
ಮನವಿಯಲ್ಲಿ, ಜೂನ್ ಮೊದಲ ವಾರದಲ್ಲಿಯೇ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ಪೂರೈಸುವಂತೆ ಒತ್ತಾಯಿಸಲಾಗಿದೆ. ಜೊತೆಗೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಡಯಟ್ ಮೂಲಕ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜಿಸುವಂತೆ ಮನವಿ ಮಾಡಲಾಗಿದೆ.
ಕ್ರೈಸ್ ವಸತಿ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ಪಾಠ ಮಾಡುತ್ತಿರುವ ಶಿಕ್ಷಕರು ಹೆಚ್ಚುವರಿ ಹೊರೆ ಹೊತ್ತಿರುವುದರಿಂದ ಅವರಿಗೆ 10% ವಿಶೇಷ ಭತ್ಯೆ ನೀಡಬೇಕು ಎಂದು ಶಿಕ್ಷಕರು ಒತ್ತಾಯಿಸಿದರು. ವಸತಿ ಗೃಹಗಳಲ್ಲಿಯೇ ವಾಸವಿದ್ದು ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಕಾರಣ ಅವರಿಗೆ ಉಚಿತ ವಸತಿ ಗೃಹ ಸೌಲಭ್ಯ ಒದಗಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಪ್ರೌಢಶಾಲಾ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಲು ಮಾನ್ಯ ಜಿ. ಕುಮಾರ ನಾಯ್ಕ್ ಸಮಿತಿ ವರದಿ ಅನ್ವಯ ನೀಡಲಾದ ಹೆಚ್ಚುವರಿ ವೇತನ ಬಡ್ತಿ ಸೌಲಭ್ಯವನ್ನು ವಸತಿ ಶಾಲಾ ಶಿಕ್ಷಕರಿಗೂ ಅನ್ವಯಿಸಬೇಕೆಂದು ಕೇಳಿಕೊಳ್ಳಲಾಗಿದೆ.
ಡಾ. ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕುಗಳಲ್ಲಿ ವಸತಿ ಶಾಲೆಗಳ ಬೇಡಿಕೆ ಹೆಚ್ಚಿರುವುದರಿಂದ, ರಾಮದುರ್ಗ ತಾಲೂಕಿನಲ್ಲಿ ಇನ್ನೂ ನಾಲ್ಕು ವಸತಿ ಶಾಲೆಗಳನ್ನು ಮಂಜೂರಾತಿ ನೀಡಬೇಕೆಂದು ಶಿಕ್ಷಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಟಕುರ್ಕಿ ವಸತಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.