ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ನಡೆಯುತ್ತಿರುವ ಲಕ್ಷ್ಮೀದೇವಿ ಜಾತ್ರೆಗೆ ಬಂದೋಬಸ್ತ್ ಕೈಗೊಂಡಿದ್ದ ಎಎಸ್‌ಐಗೆ ಹೃದಯಾಘಾತವಾಗಿದ್ದು, ಅವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಹುಬ್ಬಳ್ಳಿ ಎಪಿಎಂಸಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್.ಜಿ. ಮೀರಾನಾಯಕ್ (56) ಅವರು, ಗೋಕಾಕ್ ಜಾತ್ರೆಯ ಬಂದೋಬಸ್ತ್ ಕಾರ್ಯಚಟುವಟಿಕೆಗಾಗಿ ನಿಯೋಜನೆಗೊಂಡಿದ್ದರು. ಗೋಕಾಕ್‌ನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ದ ಅವರು ತೀವ್ರ ಎದೆ ನೋವಿನ ಹಿನ್ನೆಲೆಯಲ್ಲಿ ಅಸ್ವಸ್ಥರಾದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತದೇಹವನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.