ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪರಿಹಾರ ಮೊತ್ತ ನೀಡಲು ಭಿಕ್ಷಾಟನೆ ಅಭಿಯಾನ ನಡೆಸುತ್ತಿದ್ದ ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ದುರುಳರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ರೈತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬೈಲಹೊಂಗಲ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಉಪ ವಿಭಾಗಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಬಾಗಲಕೋಟೆ ಜಿಲ್ಲೆಯ ಬಿಳಗಿಯಲ್ಲಿ ಭಿಕ್ಷಾಟನೆ ಅಭಿಯಾನಕ್ಕೆ ತೆರಳುತ್ತಿದ್ದ ವೇಳೆ, ಯಲ್ಲಪ್ಪ ಮೇಲೆ ಐವರು ಮುಸುಕುಧಾರಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರು ಮತ್ತು ಹಲ್ಲೆಗೆ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡ ಶಿವನಶಿಂಗ ಮೋಖಾಶಿ, “ಯಲ್ಲಪ್ಪ ಅವರ ಮೇಲಿನ ಹಲ್ಲೆ ಖಂಡನೀಯ. ರೈತ ಹೋರಾಟಗಾರರಿಗೆ ರಕ್ಷಣೆ ನೀಡಬೇಕು. ಹಲ್ಲೆ ಮಾಡಿದವರನ್ನು ಬಂಧಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ದೇಮಪ್ಪ ಹುದಲಿ, ಬೀರಪ್ಪ ದೇಶನೂರ, ಅಶೋಕ ಕಳಸನ್ನವರ, ನಾಗೇಂದ್ರ ಚೌಗಲೆ, ಚಂದ್ರಪ್ಪ ಮೋಖಾಶಿ, ಸಿದ್ಧಪ್ಪ ಜಳಕದ, ಸೋಮಶೇಖರ ಕಲಘಟಗಿ, ಮಲ್ಲಿಕಾರ್ಜುನ ಜುಟ್ಟನ್ನವರ ಇದ್ದರು.