ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ತುಮ್ಮರಗುದ್ದಿ ಗ್ರಾಮದ ಬಾಣಂತಿ ಕೀರ್ತಿ ನೇಸರಗಿ (21) ಮೃತಪಟ್ಟ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ. ವೈದ್ಯರ ನಿರ್ಲಕ್ಷ್ಯವೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮತ್ತು ಸಂಬಂಧಿಕರು ಆರೋಪಿಸಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಾರ್ಚ್ 4 ರಂದು ಮಧ್ಯಾಹ್ನ 12 ಗಂಟೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣುಮಗುವಿಗೆ ಜನ್ಮನೀಡಿದ ಕೀರ್ತಿಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಆದರೆ, ಆಸ್ಪತ್ರೆಯ ವೈದ್ಯರು ತಕ್ಷಣ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸುವ ಬದಲಿಗೆ, ಅವರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸಂಜೆ ವೇಳೆಗೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ತಕ್ಷಣ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ