ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, “ಮುಹಮ್ಮದ್ ಅಲಿ ಜಿನ್ನಾ ಧಾರ್ಮಿಕತೆ ಆಧಾರದಲ್ಲಿ ದೇಶ ವಿಭಜಿಸಿದಂತೆ, ಸಿದ್ದರಾಮಯ್ಯ ಅವರ ಬಜೆಟ್ ಕೂಡ ಮತಾಧಾರಿತ ನೀತಿಗಳನ್ನು ಅನುಸರಿಸುತ್ತಿದೆ” ಎಂದು ವ್ಯಂಗ್ಯವಾಡಿದರು. “ಈ ಬಜೆಟ್ ಮುಸ್ಲಿಂ ಲೀಗ್ ಬಜೆಟಾ? ಕಾಂಗ್ರೆಸ್ ಬಜೆಟಾ?” ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಲಿ ಎಂದು ಸವಾಲು ಹಾಕಿದರು.
“ಧಾರ್ಮಿಕ ಮೀಸಲಾತಿ ಸಂವಿಧಾನದ ವಿರುದ್ಧ”
“ಸಂವಿಧಾನ ರಚನಾ ಸಮಿತಿಯು ಧಾರ್ಮಿಕ ಆಧಾರದ ಮೀಸಲಾತಿಯನ್ನು ತಿರಸ್ಕರಿಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಶಿಕ್ಷಣ, ಉದ್ಯೋಗ, ಮತ್ತು ಸರ್ಕಾರಿ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಘೋಷಿಸಿದೆ. ಹಿಂದು ಸಮುದಾಯದ ಬಡವರಿಗೆ ಇಂತಹ ಸೌಲಭ್ಯಗಳಿಲ್ಲ” ಎಂದು ಅವರು ಆರೋಪಿಸಿದರು.
“ಕಾನೂನು ಸುವ್ಯವಸ್ಥೆಗೆ ಧಕ್ಕೆ”
ಹುಬ್ಬಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ ಎಂದು ಸಿ.ಟಿ. ರವಿ ಕಿಡಿಕಾರಿದರು. “ಕ್ರಿಮಿನಲ್ ರಾಜಕಾರಣಕ್ಕೆ ಪ್ರೋತ್ಸಾಹ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ” ಎಂದು ಅವರು ಆಕ್ಷೇಪಿಸಿದರು.
“ರಾಜ್ಯ ಸಾಲದ ಹೊರೆ”
“ಸಿದ್ದರಾಮಯ್ಯ ಸರ್ಕಾರ ₹4 ಲಕ್ಷ ಕೋಟಿ ಸಾಲ ಪಡೆದಿದೆ. ಆದರೆ, ಕಳೆದ ಬಜೆಟ್‌ನಲ್ಲಿ ಘೋಷಿಸಿದ ಅನುದಾನದ ಕೇವಲ 55% ಮಾತ್ರ ಖರ್ಚಾಗಿದೆ. ಉಳಿದ 45% ಹಣ ಈ ಆರ್ಥಿಕ ವರ್ಷ ಮುಗಿಯುವ ಮೊದಲೇ ಖರ್ಚು ಮಾಡಬಹುದೇ?” ಎಂದು ಪ್ರಶ್ನಿಸಿದರು. “ರಾಜ್ಯದ ಆದಾಯ ಕೊರತೆಯಿಂದ ತೆರಿಗೆ ದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ” ಎಂದು ಅವರು ಆರೋಪಿಸಿದರು.