ಸುವರ್ಣ ವಿಧಾನಸೌಧವನ್ನು ಉತ್ತರ ಕರ್ನಾಟಕದ ಆಡಳಿತ ಶಕ್ತಿಕೇಂದ್ರವನ್ನಾಗಿ ಮಾಡಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಸರ್ಕಾರದಿಂದ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಪ್ರತ್ಯೇಕ ರಾಜ್ಯದ ಬೇಡಿಕೆಗೆ ವೇಗ ಸಿಗಲಿದೆ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡ ಅಶೋಕ ಪೂಜಾರಿ ಎಚ್ಚರಿಸಿದ್ದಾರೆ.
ಬೆಳಗಾವಿ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಕರ್ನಾಟಕದ ಜನಪ್ರತಿನಿಧಿಗಳು ಮತ್ತು ಸಚಿವರು ಈ ಹೋರಾಟವನ್ನು ಯಶಸ್ವಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ತಮ್ಮ ಭಾಗಕ್ಕೆ ಪ್ರತ್ಯೇಕ ಸಚಿವಾಲಯವನ್ನು ಮಂಜೂರು ಮಾಡಿಸಿಕೊಂಡಂತೆ, ಕಿತ್ತೂರು ಕರ್ನಾಟಕಕ್ಕೂ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಅಗತ್ಯವಿದೆ ಎಂದು ಒತ್ತಾಯಿಸಿದರು. ಈ ಹಿನ್ನೆಲೆ ಸೆಪ್ಟೆಂಬರ್ 23ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಆವರಣದಲ್ಲಿ ಮಹಾ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು.
2012ರಲ್ಲಿ ಸುವರ್ಣ ವಿಧಾನಸೌಧ ಉದ್ಘಾಟನೆಯಾದಾಗಿನಿಂದಲೇ ಇದನ್ನು ಉತ್ತರ ಕರ್ನಾಟಕದ ಆಡಳಿತ ಶಕ್ತಿಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ. 100ಕ್ಕೂ ಹೆಚ್ಚು ಶ್ರೀಗಳು ಕೂಡ ಈ ಬೇಡಿಕೆಗೆ ಬೆಂಬಲ ನೀಡಿದ್ದರು. ಆದರೂ ಸರ್ಕಾರ ಬೇಡಿಕೆಯನ್ನು ಪೂರೈಸಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಮುಖ್ಯ ಕಾರಣ ಎಂದು ದೂರಿದರು.
ಹಿಂದಿನ ಹೋರಾಟದ ನಂತರವೇ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆದಿದ್ದು, ನಂತರ ಸುವರ್ಣ ವಿಧಾನಸೌಧ ನಿರ್ಮಾಣಗೊಂಡಿತ್ತನ್ನು ಸ್ಮರಿಸಿದ ಪೂಜಾರಿ, “ಮುಖ್ಯಮಂತ್ರಿಯವರ ಬಳಿ ನಿಯೋಗವನ್ನು ಕರೆದೊಯ್ದು ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುತ್ತದೆ. ಆದರೆ ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ, ಪ್ರತ್ಯೇಕ ರಾಜ್ಯದ ಹೋರಾಟ ಬಲಗೊಳ್ಳುವುದು ಖಚಿತ” ಎಂದು ಎಚ್ಚರಿಸಿದರು.