ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದ ಘಟನೆ ಬೆಳಗಾವಿ ನಗರದ ಹನುಮಾನ ನಗರದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಚಿಕ್ಕಮಲ್ಲಿಗವಾಡ ಗ್ರಾಮದ ಅಶ್ವಿನಿ ಹೆಗಡೆ (ಮೃತ ಮಹಿಳೆ). ಕೊಲೆ ಆರೋಪದ ಮೇಲೆ ಪತಿ ವಿಠಲ್ ಹೆಗಡೆಯನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಮಾರು ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಜೀವನೋಪಾಯಕ್ಕಾಗಿ ಬೆಳಗಾವಿಯಲ್ಲಿ ನೆಲೆಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಪತ್ನಿಯ ಶೀಲದ ಬಗ್ಗೆ ಅನುಮಾನಪಡುತ್ತಿದ್ದ ವಿಠಲ್, ಕ್ಷುಲ್ಲಕ ಕಾರಣಗಳಿಗೆ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಅಶ್ವಿನಿ ತಾಯಿಯ ಮನೆಗೆ ತೆರಳಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾವನಿಗೆ ಊಟ ನೀಡಲು ಮನೆಗೆ ಬಂದಿದ್ದ ವೇಳೆ, ಕುಡಿದ ಮತ್ತಿನಲ್ಲಿದ್ದ ವಿಠಲ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಅಶ್ವಿನಿ ಅವರ ತಾಯಿ ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ವಿಠಲ್ ಹೆಗಡೆಯನ್ನು ಬಂಧಿಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




