ಕೇಂದ್ರ ಚುನಾವಣಾ ಆಯೋಗದೊಳಗೆ ಎಲ್ಲವೂ ಸರಿಯಿಲ್ಲವೇ? ಇಬ್ಬರು ಚುನಾವಣಾ ಆಯುಕ್ತರು ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ನೇರವಾಗಿ ಕೇಂದ್ರ ಸರ್ಕಾರಕ್ಕೆ ದೂರು ನೀಡಿರುವುದು ಮತ್ತು ಆ ದೂರನ್ನು ಸರ್ಕಾರ ‘ಸಾಂವಿಧಾನಿಕ ಸಂಸ್ಥೆಯಲ್ಲಿನ ಹಸ್ತಕ್ಷೇಪ’ ಎಂಬ ಕಾರಣ ನೀಡಿ ಕೈಬಿಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತರೊಬ್ಬರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಇಬ್ಬರು ಚುನಾವಣಾ ಆಯುಕ್ತರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ‘ಅನುಚಿತ’ ಮತ್ತು ‘ಸಾಂವಿಧಾನಿಕ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿನ ಹಸ್ತಕ್ಷೇಪ’ ಎಂದು ಭಾವಿಸಿರುವ ಕೇಂದ್ರ ಸಂಪುಟ ಸಚಿವಾಲಯವು, ಯಾವುದೇ ಕ್ರಮ ಜರುಗಿಸಲು ನಿರಾಕರಿಸಿತ್ತು.
ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗಾರ್ಗ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಜುಲೈ 29ರಂದು ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪ್ರತ್ಯೇಕ ದೂರು ಪತ್ರಗಳನ್ನು ಬರೆದಿದ್ದರು. ಈ ಗಂಭೀರ ವಿಚಾರವು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಲಭ್ಯವಾಗಿರುವ ಸಚಿವಾಲಯದ ಆಂತರಿಕ ಕಡತದ ಟಿಪ್ಪಣಿಗಳಿಂದ ಈಗ ಬಹಿರಂಗವಾಗಿದೆ.
ಆಡಳಿತ ವಿಭಾಗದ ಉಸ್ತುವಾರಿ ಹೊಂದಿದ್ದ ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ್ ಯೆಟುರು ಅವರು ರಜೆಯಲ್ಲಿದ್ದ ಕಾರಣ, ಮನೀಶ್ ಗಾರ್ಗ್ ಅವರಿಗೆ ಆಡಳಿತ ವಿಭಾಗದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿತ್ತು. ಆ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಗಾರ್ಗ್ ಅವರು ಆಯೋಗದ ಜೊತೆ ಯಾವುದೇ ಚರ್ಚೆ ನಡೆಸದೆ ಅಧಿಕಾರಿಗಳ ಕಾರ್ಯ ಹಂಚಿಕೆ ಆದೇಶವನ್ನು ಏಕಾಏಕಿ ಹೊರಡಿಸಿದ್ದರು ಎಂದು ಸಂಧು ದೂರಿದ್ದರು.
ಇದೇ ರೀತಿಯ ಮತ್ತೊಂದು ದೂರು ಪತ್ರದಲ್ಲಿ ವಿವೇಕ್ ಜೋಶಿ ಅವರು, ತಾವು ಆಡಳಿತ ವಿಭಾಗದಿಂದ ಸಂಬಂಧಪಟ್ಟ ಕಡತವನ್ನು ಕೇಳಿದಾಗ ಅದನ್ನು ಒದಗಿಸಿಲ್ಲ ಎಂದು ನೇರವಾಗಿ ಆರೋಪಿಸಿದ್ದರು. ಈ ಪತ್ರಗಳ ಕುರಿತು ಆಗಸ್ಟ್ 3 ಮತ್ತು 4ರಂದು ಕ್ಯಾಬಿನೆಟ್ ಸಚಿವಾಲಯದಲ್ಲಿ ಆಂತರಿಕ ಚರ್ಚೆಗಳು ನಡೆದಿವೆ. ಚುನಾವಣಾ ಆಯೋಗವು ಬಹುಸದಸ್ಯರನ್ನು ಹೊಂದಿರುವ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವಾಲಯ ನಿರ್ಧರಿಸಿದೆ.
ಆಯುಕ್ತರಿಬ್ಬರು ವೈಯಕ್ತಿಕ ನೆಲೆಯಲ್ಲಿ ಪತ್ರ ಬರೆದಿದ್ದಾರೆಯೇ ಹೊರತು, ಇಡೀ ಆಯೋಗದ ಅಧಿಕೃತ ನಿರ್ಧಾರವಾಗಿ ಇದು ಬಂದಿಲ್ಲ. ಆಯೋಗದಿಂದ ಅಧಿಕೃತವಾಗಿ ಯಾವುದೇ ಪತ್ರ ಬಾರದಿರುವ ಹಿನ್ನೆಲೆಯಲ್ಲಿ, ಈ ಹಂತದಲ್ಲಿ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ. ಮನೀಶ್ ಗಾರ್ಗ್ ಮೂಲತಃ ಐಎಎಸ್ ಅಧಿಕಾರಿಯಾಗಿದ್ದರೂ, ಪ್ರಸ್ತುತ ಅವರು ಚುನಾವಣಾ ಆಯೋಗದ ನಿಯಮಗಳಿಗೆ ಮಾತ್ರ ಒಳಪಡುತ್ತಾರೆ ಎಂದು ತಿಳಿಸಲಾಗಿದೆ.
ಈ ಕಾರಣಕ್ಕಾಗಿ ಕೇಂದ್ರ ಸಚಿವಾಲಯವು ಇಬ್ಬರು ಆಯುಕ್ತರ ದೂರು ಪತ್ರಗಳನ್ನು ಕೇವಲ ಸ್ವೀಕರಿಸಿ, ಅದರ ಒಂದು ಪ್ರತಿಯನ್ನು ಮುಖ್ಯ ಚುನಾವಣಾ ಆಯುಕ್ತರ (CEC) ಕಚೇರಿಗೆ ಕಳುಹಿಸಲು ನಿರ್ಧರಿಸಿತು. ಇದರ ಜೊತೆಗೆ ಮುಂದಿನ ಮಾಹಿತಿಗಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೂ (DoPT) ಇದನ್ನು ರವಾನಿಸಲು ತೀರ್ಮಾನಿಸಿತು. ಅದರಂತೆ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ಆಗಸ್ಟ್ 5ರಂದು ಇಬ್ಬರೂ ಚುನಾವಣಾ ಆಯುಕ್ತರಿಗೆ ಪ್ರತ್ಯೇಕವಾಗಿ ಪತ್ರ ಸ್ವೀಕೃತಿಯ ಹಿಂಬರಹವನ್ನು ಕಳುಹಿಸಿದ್ದಾರೆ.





