ಬೆಳಗಾವಿ ನಗರದಲ್ಲಿನ ಖಾಸಗಿ ಜೈ ಕಿಸಾನ್ ಹೋಲ್‌ಸೇಲ್ ವೆಜಿಟೇಬಲ್ ಮಾರುಕಟ್ಟೆ ರೈತರ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಖಾಸಗಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿದ ನಂತರ 8 ರಿಂದ 10 ಶೇಕಡಾ ಕಮೀಷನ್ ಕಾನೂನು ಬಾಹಿರವಾಗಿ ವಸೂಲಿ ಮಾಡಲಾಗುತ್ತಿದ್ದು, ಪ್ರತಿ ಚೀಲದಲ್ಲಿ 2 ರಿಂದ 5 ಕೆ.ಜಿ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ದರವನ್ನು ರೈತರ ಮುಂದೆ ತಿಳಿಸದೇ, “ಕಂಪನಿ ದರ” ನಿಗದಿ ಮಾಡಿ, ಒಂದು ದಿನದ ನಂತರವೇ ಬೆಲೆ ಪ್ರಕಟಿಸಲಾಗುತ್ತಿದೆ. ರೈತರ ಹಣ ತಕ್ಷಣ ನೀಡದೇ ತಡ ಮಾಡಲಾಗುತ್ತಿದ್ದು, ಅಧಿಕೃತ ರಸೀದಿ ನೀಡದೇ ಬಿಳಿ ಚೀಟಿಯಲ್ಲಿ ಲೆಕ್ಕ ಬರೆದು ಅಡವಾನ್ಸ್, ರೇಂಟ್, ಇತರ ಹೆಸರಿನಲ್ಲಿ ಹಣ ಕಡಿತ ಮಾಡಲಾಗುತ್ತಿದೆ ಎಂದು ರೈತರು ದೂರಿದರು.
ಈ ಕುರಿತು ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, 2024 ರ ಚಳಿಗಾಲ ಅಧಿವೇಶನದಲ್ಲಿ 20 ಸಾವಿರ ರೈತರು ಸೇರಿಕೊಂಡು ಪ್ರತಿಭಟನೆ ನಡೆಸಿದಾಗ, ಮುಖ್ಯಮಂತ್ರಿ ಇಬ್ಬರ ವಾರದಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಕೃಷಿ ಮಾರಾಟ ಸಚಿವರೂ 25 ಜೂನ್ 2025 ರಂದು ರೈತ ಮುಖಂಡರ ಸಭೆಯಲ್ಲಿ ಒಂದು ವಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರೂ, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.
ಬರುವ 10 ಸೆಪ್ಟೆಂಬರ್ 2025 ರೊಳಗಾಗಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ಲೈಸೆನ್ಸ್
ರದ್ದುಪಡಿಸಿ ಮಾರುಕಟ್ಟೆ ಬಂದ್ ಮಾಡದಿದ್ದರೆ, ಸಾವಿರಾರು ರೈತರು, ರೈತ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಸೇರಿಕೊಂಡು ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆ ಆರಂಭಿಸುವುದಾಗಿ ರೈತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಚುನ್ನಪ್ಪ ಪೂಜಾರಿ (ರಾಜ್ಯಾಧ್ಯಕ್ಷರು), ಪ್ರಕಾಶ್ ನಾಯಿಕ, ಕಿಶನ್ ನಂದಿ, ಸಂಜು ಹಾವನ್ನವರ್ ಹಾಗೂ ರಮಕಾಂತ್ ಕೋಂಡಸ್ಕರ್ ಉಪಸ್ಥಿತರಿದ್ದರು.