ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿರಿಸಿದ ಗೊಬ್ಬರವನ್ನು ರೈತರಿಗೆ ವಿತರಿಸದೇ ಸ್ವತಃ ಅಧಿಕಾರಿಗಳೇ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ಸದಸ್ಯರು ತೋಟಗಾರಿಕೆ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಸುರೇಶ ಸಂಪಗಾವಿ ಮಾತನಾಡಿ, ‘ತಲಾ ₹ 4,500 ಬೆಲೆಯ 250 ಗೊಬ್ಬರದ ಚೀಲಗಳನ್ನು ಅವಶ್ಯವಿರುವ ರೈತರಿಗೆ ನಿಡದೇ ಅಧಿಕಾರಿಗಳೇ ಕಳವು ಮಾಡಿದ್ದಾರೆ ಶುಕ್ರವಾರ ಸಂಜೆಯವರೆಗೂ ರೈತರು ಕಚೇರಿಯಲ್ಲಿದ್ದರು. ಕಚೇರಿ ಸಮಯ ಮುಗಿಯುವವರೆಗೂ ನಿಂತರೂ ಗೊಬ್ಬರ ವಿತರಿಸಿಲ್ಲ. ಶನಿವಾರ ಮತ್ತು ಭಾನುವಾರ ರಜೆ ಇದ್ದಾಗ ಕಳವು ಮಾಡಿದ್ದಾರೆ ಗೊಬ್ಬರ ಪಡೆದ ರೈತರ ವಿವರ ನೀಡಿರಿ ಎಂದರೆ ನೀಡುತ್ತಿಲ್ಲ. ಉತ್ತರಿಸಬೇಕಾದವರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಕೆಲವರು ಸಭೆಯ ನೆಪ ಹೇಳಿ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಮಾರ್ಚ್‌ನಲ್ಲಿ ನೀಡಬೇಕಾದುದನ್ನು ಮಳೆಗಾಲ ಆರಂಭವಾದರೂ ಕೊಡುತ್ತಿಲ್ಲ. ಅದನ್ನೇ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಬಂದ್ ಮಾಡಿ ಹೋರಾಟ ತೀವ್ರಗೊಳಿಸಲು ರೈತರು ಮುಂದಾದರು. ಪೊಲೀಸಲು ರೈತರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಲು ಯಶಸ್ವಿಯಾದರು. ನಂತರ ಶಿರಸ್ತೇದಾರ ಶಶಿರಾಜ ವನಕೆ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ಬಸವರಾಜ ಮೊಖಾಶಿ, ಮಹಾಂತೇಶ ಕಮತ, ಬೀರಪ್ಪ ದೇಶನೂರ, ಮಹಾಂತೇಶ ಮುತವಾಡ, ಸಮರ್ಥ ಪಾಟೀಲ, ರಾಮನಗೌಡ ಪಾಟೀಲ, ಶಿವಪ್ಪ ಹೊರಟ್ಟಿ, ಹನಮಂತ ದನದಮನಿ, ಮೂಗಬಸಪ್ಪ ಕರೀಕಟ್ಟಿ, ಮಲ್ಲಿಕಾರ್ಜುನ ಹಂಚಿನಾಳ, ಸಿದ್ದಪ್ಪ ಕರಡಿ, ರಾಮಲಿಂಗಪ್ಪ ದನದಮನಿ, ಗುರುನಾಥ ಕರೀಕಟ್ಟಿ, ಜೆ.ವಿ. ಅಗಡಿ, ಸಿದ್ದಪ್ಪ ಪಟ್ಟದಕಲ್ಲ ಇತರರು ಉಪಸ್ಥಿತರಿದ್ದರು.