ಕಳಪೆ ಬೀಜ, ಕಳಪೆ ಕೀಟನಾಶಕದಿಂದ ಪ್ರಸಕ್ತ ಹಂಗಾಮಿನ ಸೋಯಾಬಿನ್, ಹೆಸರು, ಹತ್ತಿ ಮತ್ತು ಉದ್ದು ಸೇರಿದಂತೆ ವಿವಿಧ ತರಹದ ಬೆಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.ಕಳಪೆ ಬೀಜ, ಕಳಪೆ ಕೀಟನಾಶಕದಿಂದ ಪ್ರಸಕ್ತ ಹಂಗಾಮಿನ ಸೋಯಾಬಿನ್, ಹೆಸರು, ಹತ್ತಿ ಮತ್ತು ಉದ್ದು ಸೇರಿದಂತೆ ವಿವಿಧ ತರಹದ ಬೆಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತ, ಎಪಿಎಂಸಿ, ಇಂಚಲ ಕ್ರಾಸ್, ಬಸ್ ನಿಲ್ದಾಣ ಮೂಲಕ ಪ್ರತಿಭಟನೆ ನಡೆಸಿ, ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಧರಣಿ ಕುಳಿತರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಉದ್ಯಮಿ ವಿಜಯ ಮೆಟಗುಡ ಮಾತನಾಡಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ, ಚನ್ನಮ್ಮನ ಕಿತ್ತೂರು, ಗೋಕಾಕ ಹಾಗೂ ರಾಮದುರ್ಗ ತಾಲ್ಲೂಕಿನಾದ್ಯಂತ ಸೋಯಾಬಿನ್, ಹೆಸರು, ಹತ್ತಿ, ಹಾಗೂ ಉದ್ದು ಬೆಳೆಗಳು ಕೀಡೆ, ಹುಳ ಭಾದೆಯಿಂದ ಸಂಪೂರ್ಣ ಹಾಳಾಗಿವೆ. ಕಳಪೆ ಬೀಜ, ಕಳಪೆ ಕೀಟನಾಶಕ ಇದಕ್ಕೆ ಕಾರಣವಾಗಿದ್ದು ಸುಮಾರು 4 ರಿಂದ 5 ಬಾರಿ ಔಷಧ ಸಿಂಪರಣೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಒಂದು ಎಕರೆ ಬೆಳೆಯಲು ಸುಮಾರು ₹40 ಸಾವಿರದಿಂದ *50ಸಾವಿರ ವರೆಗೆ ಖರ್ಚು ಮಾಡಲಾಗಿದೆ. ಹೀಗಾಗಿ ಸರ್ಕಾರ ರೈತರ ಹಿತ ದೃಷ್ಟಿಯಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಬೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಇಂಗಳಗುಪ್ಪಿ ಕೃಷ್ಣಗೌಡ, ಬಸನಗೌಡ ಪಾಟೀಲ, ಸುರೇಶ ವಾಲಿ, ಮಹಾಂತೇಶ ಕಮತಗಿ, ಶ್ರೀಕಾಂತ ಶಿರಹಟ್ಟಿ, ಉಪವಿಭಾಗಾಧಿಕಾರಿ ಪ್ರದೀಪ ಜೈನ, ತಹಶೀಲ್ದಾರ ಹನಮಂತ ಶಿರಹಟ್ಟಿ, ಕೃಷಿ ಅಧಿಕಾರಿ ಬಸವರಾಜ ದಳವಾಯಿ, ಜಂಟಿ ನಿರ್ದೇಶಕ ಎಚ್.ಡಿ.ಕೊಳೇಕರ ನೂರಾರು ರೈತರು ಇದ್ದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ ‘ರೈತರು ದೇಶದ ಬೆನ್ನೆಲುಬು. ರಾಜ್ಯ ಸರ್ಕಾರ ಅನ್ನದಾತರ ಪರ ನಿಲುವು ಹೊಂದಿದೆ. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ರೈತರ ಸಮಸ್ಯೆ ಬಗ್ಗೆ ಸಮಾಲೋಚನೆ ಮಾಡಿದ್ದೇನೆ. ರೈತರಿಗಾದ ಬೆಳೆ ಹಾನಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವೆ. ಈ ಹೋರಾಟವನ್ನು ಕೈಬೀಡಬೇಕು ಎಂದು ಮನವಿ ಮಾಡಿದರು.