ಪ್ರೇಯಸಿಯ ಮರ್ಯಾದೆಗೇಡು ಹತ್ಯೆಯಿಂದ ಮನನೊಂದಿದ್ದ ಯುವಕ, ಆಕೆಯ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿಕ್ಷೇತ್ರ ಗ್ರಾಮದಲ್ಲಿ ನಡೆದಿದೆ.
ನದಿಗುಡಿಕ್ಷೇತ್ರ ಗ್ರಾಮದ ಕೃಷ್ಣ ಸಹದೇವ ಪಾಟೀಲ (30) ಆತ್ಮಹತ್ಯೆ ಮಾಡಿಕೊಂಡ ಯುವಕ. ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ಸತ್ಯವ್ವ ಸಂತೋಷ ಹೆಳವಿ ಅವರನ್ನು ಕೃಷ್ಣ ಪ್ರೀತಿಸುತ್ತಿದ್ದರು. ಆರು ತಿಂಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿದ್ದು, ಬಳಿಕ ಪೊಲೀಸರು ಪತ್ತೆ ಹಚ್ಚಿ ಕುಟುಂಬದವರಿಗೆ ಒಪ್ಪಿಸಿದ್ದರು.
ನಂತರ ಸತ್ಯವ್ವಳನ್ನು ಕುಟುಂಬದವರು ಮಹಾರಾಷ್ಟ್ರಕ್ಕೆ ಕರೆದೊಯ್ದು ಬೇರೆ ಮದುವೆಗೆ ಒತ್ತಾಯಿಸಿದ್ದರೆಂದು ಹೇಳಲಾಗುತ್ತಿದೆ. ಸತ್ಯವ್ವಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಕೃಷ್ಣ ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಸತ್ಯವ್ವಳ ಮರ್ಯಾದೆಗೇಡು ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣವನ್ನು ನಂತರ ಮಿರಜ್ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರೇಯಸಿಯ ಸಾವಿನ ನೋವಿನಿಂದ ಬಳಲುತ್ತಿದ್ದ ಕೃಷ್ಣ, ಆಕೆಯ ಜನ್ಮದಿನವಾದ ಜೂನ್ 4ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಸ
ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ




