ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ 1.5 ಕೆಜಿಗೂ ಹೆಚ್ಚು ಚಿನ್ನಾಭರಣ ನಾಪತ್ತೆಯಾಗಿದೆ ಎಂದು ರಾಜ್ಯ ಗಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಪಂಚಮಸಾಲಿ ಸಮುದಾಯದ ಮುಖಂಡ ಸೋಮಣ್ಣ ಬೇವಿನಮರದ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಠದ ಟ್ರಸ್ಟಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಟ್ರಸ್ಟ್‌ನವರು ಸದ್ಯ ಕೇವಲ 27 ಕೋಟಿ ರೂಪಾಯಿ ನಗದು ಹಣದ ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಟ್ಟಿದ್ದಾರೆ. ಆದರೆ, ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಲೆಕ್ಕವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ,” ಎಂದು ದೂರಿದ್ದಾರೆ.
“2008ರ ಫೆಬ್ರವರಿ 18ರಂದು ಮಠ ಸ್ಥಾಪನೆಯಾದ ದಿನ ಭಕ್ತರು ಅತ್ಯಂತ ಶ್ರದ್ಧೆಯಿಂದ ಶ್ರೀಗಳಿಗೆ ಚಿನ್ನದ ಉಂಗುರ, ಚಿನ್ನದ ಕಡಗ ಹಾಗೂ ಭವ್ಯವಾದ ಚಿನ್ನದ ಕಿರೀಟ ಸೇರಿದಂತೆ ಸುಮಾರು ಒಂದೂವರೆ ಕೆಜಿ ಚಿನ್ನಾಭರಣಗಳನ್ನು ದಾನವಾಗಿ ನೀಡಿದ್ದರು. ಸ್ವಾಮೀಜಿಯವರಿಗೆ ನೀಡಲಾಗಿದ್ದ ಈ ಎಲ್ಲ ಆಭರಣಗಳನ್ನು ಸದ್ಯ ಮಠದ ಟ್ರಸ್ಟಿಗಳೇ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ,” ಎಂದು ಸೋಮಣ್ಣ ಆರೋಪಿಸಿದ್ದಾರೆ.
ಮಠದ ಆಸ್ತಿ ವಿವರಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಒತ್ತಾಯಿಸಿದ ಅವರು, “ಮಠದ ಹೆಸರಿನಲ್ಲಿ ಸದ್ಯ ಲಭ್ಯವಿರುವ ಒಟ್ಟು ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು ಎಷ್ಟು? ಮಠಕ್ಕೆ ಸೇರಿದ ಜಮೀನು ಎಲ್ಲೆಲ್ಲಿದೆ? ಈ ಎಲ್ಲ ಅಧಿಕೃತ ದಾಖಲೆಗಳನ್ನು ಟ್ರಸ್ಟ್‌ನವರು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು,” ಎಂದು ಆಗ್ರಹಿಸಿದ್ದಾರೆ.





