ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳಗಾವಿ–ಬಾಗಲಕೋಟೆ ಮುಖ್ಯರಸ್ತೆಯ ಸೋಮನಟ್ಟಿ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತರನ್ನು ಬೆಳಗಾವಿ ತಾಲೂಕಿನ ಕರಿಕಟ್ಟಿ ಗ್ರಾಮದ ಸಚಿನ್ ಯಲ್ಲಪ್ಪ ಬೋರಿಮರದ (21) ಮತ್ತು ಬಾಲಕೃಷ್ಣ ಬಸಪ್ಪ ಸುಲದಾಳ (19) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಲಕ್ಕಪ್ಪ ಯಲ್ಲಪ್ಪ ಬೋರಿಮರದ (23) ಅವರನ್ನು ತಕ್ಷಣ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಯರಗಟ್ಟಿಯಿಂದ ಬೆಳಗಾವಿ ಕಡೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಸೋಮನಟ್ಟಿ ಗ್ರಾಮದ ಬಳಿ ವೇಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಡಿ.ವೈ.ಎಸ್.ಪಿ. ಡಾ. ವೀರಯ್ಯ ಹಿರೇಮಠ, ಪಿ.ಐ. ಗಜಾನನ ನಾಯ್ಕ, ಪಿ.ಎಸ್.ಐ. ಈರಪ್ಪ ರಿತ್ತಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಗ್ರಾಮಸ್ಥರು ಕೂಡ ಸಹಕರಿಸಿದರು.
ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.