ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆಯ ಪೊಲೀಸರು ದೊಡ್ಡ ಪ್ರಮಾಣದ ಕಳ್ಳತನದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಸುಮಾರು ₹20.30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಮಹಾದೇವ ನಾರಾಯಣ ಧಮನಿಕರ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾದೇವನ ವಿರುದ್ಧ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಹಲವಾರು ಪೊಲೀಸ್ ಠಾಣೆಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ದೂರುಗಳು ದಾಖಲಾಗಿದ್ದವು. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂವರು ನಿವಾಸಿಗಳ ಮನೆಗಳಲ್ಲಿ ಹಾಗೂ ಧಾರವಾಡ ತಾಲೂಕಿನ ಇಬ್ಬರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಕಳವು ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಶೋಧ ಕಾರ್ಯಾಚರಣೆಯಲ್ಲಿ ಬೈಲಹೊಂಗಲ ಉಪವಿಭಾಗದ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ, ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐಗಳಾದ ಪ್ರವೀಣ್ ಗಂಗೋಳೆ, ಪ್ರವೀಣ್ ಕೋಟಿ ಹಾಗೂ ಎಎಸ್‌ಐಗಳಾದ ರಮೇಶ್ ಗೆಜೇರಿ, ಬಿ.ಪಿ. ಪರಗನ್ನವರ ಮತ್ತು ಸಿಬ್ಬಂದಿ ತಂಡ ತೊಡಗಿಸಿಕೊಂಡಿತ್ತು.
ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎಸ್. ಭೀಮಾಶಂಕರ್ ಗುಳೇದ, ಹೆಚ್ಚುವರಿ ಎಸ್‌ಪಿ ಶೃತಿ ಎನ್.ಎಸ್., ಹಾಗೂ ಡಿವೈಎಸ್ಪಿ ಆರ್.ಬಿ. ಬಸರಗಿ ಅವರು ಈ ಯಶಸ್ವಿ ಕಾರ್ಯಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.