ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜುಲೈ 1ರಿಂದ ಆಗಸ್ಟ್ 10ರವರೆಗೆ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು ₹76.60 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಇದರಲ್ಲಿ ₹67 ಲಕ್ಷ ನಗದು, ₹5.84 ಲಕ್ಷ ಮೌಲ್ಯದ ಬಂಗಾರದ ಆಭರಣಗಳು, ₹1.15 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿಗಳು ಸೇರಿವೆ.
“ಮಳೆಯಿಂದಾಗಿ ದೇವಸ್ಥಾನ ಬಂದ್ ಆಗಿದೆ ಎಂಬುದು ಸುಳ್ಳು. ಎಂದಿನಂತೆ ಧಾರ್ಮಿಕ ಆಚರಣೆ ನಡೆಯುತ್ತಿವೆ. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯಬಹುದು” ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ನಾಗರತ್ನ ಚೋಳಿನ, ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆಯ ರೇಣುಕಾ ಶಿಂತ್ರಿ, ಸಿವಾನಂದ ನೇಸರಗಿ, ಅಲ್ಲಮಪ್ರಭು ಪ್ರಭುನವರ, ಎನ್.ಎಂ. ಮುದಗೌಡ್ರ, ಆರ್.ಎಚ್. ಸವದತ್ತಿ, ಪ್ರಭು ಹಂಜಗಿ, ಎಎಸ್‌ಐಡಿಅರ್ ಸಣ್ಣಮಾಳಗೆ, ಆನಂದ ಗೋರವನಕೋಳ್ಳ ಹಾಗೂ ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.