ಬೆಳಗಾವಿ ಜಿಲ್ಲೆಯ ಕಾಗವಾಡ ಶಾಸಕ ಹಾಗೂ ವಾಕರಸಾ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಅವರು ಸಚಿವ ಸ್ಥಾನ ಯಾಕೆ? ಮುಖ್ಯ ಮಂತ್ರಿ ಆಗುವದಕ್ಕೂ ಅವಕಾಶ ಸಿಗಬೇಕೆಂದು ಆಗ್ರಹಿಸಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಐದು ಬಾರಿ ಶಾಸಕನಾಗಿದ್ದರೂ ಇಂದಿಗೂ ಸಚಿವ ಸ್ಥಾನ ಸಿಗಲಿಲ್ಲ. ನನ್ನಿಗಿಂತ ಕಿರಿಯರಾದ ಕೃಷ್ಣ ಬೈರೇಗೌಡ,ಫ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಸಚಿವರಾಗಿದ್ದಾರೆ. ಅವರಿಗೆ ಸಮರ್ಥವಾಗಿ ಕೆಲಸ ಮಾಡುವ ಸಾಮರ್ಥ್ಯ ಇದ್ದಂತೆ, ನಾನೂ ಅದಕ್ಕಿಂತ ಕಡಿಮೆ ಇಲ್ಲ. ಸಚಿವ ಸ್ಥಾನ ನೀಡಿದರೆ ಉತ್ತಮ ಕೆಲಸ ಮಾಡಿ ತೋರಿಸುತ್ತೇನೆ” ಎಂದರು.
ಅವರು ಮುಂದುವರೆದು, ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಬ್ಬ ಶಾಸಕರಿಗೂ 500 ಕೋಟಿ ರೂ. ಅನುದಾನ ಸಿಗುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ ಹೊರತುಪಡಿಸಿ ಉತ್ತರ ಕರ್ನಾಟಕದ ಹಳ್ಳಿಗಳು ಸಾಕಷ್ಟು ಹಿಂದುಳಿದಿವೆ. ಹಾಗಾಗಿ ನಮ್ಮ ಭಾಗಕ್ಕೂ ಸರ್ಕಾರದಿಂದ ವಿಶೇಷ ಅನುದಾನ ನೀಡಬೇಕು” ಎಂದು ಬೇಡಿಕೊಂಡರು.
ಇದೇ ವೇಳೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ ಅವರು, “ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ಪ್ರತ್ಯೇಕ ರಾಜ್ಯ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ಕೂಡ ಈ ಬೇಡಿಕೆಗೆ ಸಹಮತಿಯಾಗಿದ್ದೇನೆ” ಎಂದು ಸ್ಪಷ್ಟಪಡಿಸಿದರು.