ಭಾರೀ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ರೈತರ ಬೆಳೆ ನಾಶವಾಗಿದ್ದು, ಪ್ರವಾಹದಿಂದ ಸಂತ್ರಸ್ತರ ಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ, ಇದನ್ನು ರಾಷ್ಟ್ರೀಯ ಪ್ರಕೃತಿ ವಿಕೋಪವೆಂದು ಘೋಷಿಸಬೇಕೆಂದು ಭಾರತೀಯ ಕೃಷಿಕ ಸಮಾಜ ಸರ್ಕಾರವನ್ನು ಆಗ್ರಹಿಸಿದೆ.
ಬೆಳಗಾವಿ ನಗರದಲ್ಲಿ ರೈತರ ಪರವಾಗಿ ಮನವಿ ಸಲ್ಲಿಸಿದ ಸಂಘಟನೆಯ ಮುಖಂಡ ಸಿದಗೌಡ ಮೋದಗಿ ಅವರು ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ ಮುಂಗಾರು ಆರಂಭದಲ್ಲಿ ರೈತರಲ್ಲಿ ಸಂತಸ ಮೂಡಿಸಿದ ಮಳೆಯೇ ಬಳಿಕ ದುರಂತವಾಗಿ ಮಾರ್ಪಟ್ಟಿದ್ದು, ಅಪಾರ ಮಳೆಯಿಂದಾಗಿ ರೈತರ ಬೆಳೆ ಹಾನಿ, ಮನೆ–ಮಾಳಿಗೆಗಳ ಜಲಾವೃತ ಹಾಗೂ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.
ಸಂಘಟನೆಯ ಪ್ರಮುಖ ಬೇಡಿಕೆಗಳು:
ಈ ಸಾಲಿನಲ್ಲಿ ಪೂರೈಸಿದ ಕಳಪೆ ಸೋಯಾಬಿನ್ ಬೀಜಗಳ ಕಾರಣ ರೈತರಿಗೆ ಭಾರೀ ನಷ್ಟವಾಗಿದ್ದು, ಸಂಬಂಧಿಸಿದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಜರುಗಿಸಬೇಕು.
ಸೋಯಾಬಿನ್ ಬೆಳೆಗಳಿಗೆ ಅಂಟಿದ ಕೀಟಭಾಧೆ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಕೃಷ್ಣಾ, ಹಿರಣ್ಯಕೇಶಿ ನದಿಗಳ ಪ್ರವಾಹದಿಂದ ಬೆಳೆಗಳು ಹಾಗೂ ಮನೆಗಳು ಹಾನಿಗೊಂಡಿವೆ.
ಜಿಲ್ಲಾಧಿಕಾರಿಗಳು ಫಸಲ್ ಭಿಮಾ ಯೋಜನೆ ಕುಂದು–ಕೊರತೆ ನಿವಾರಣಾ ಸಭೆ ತಕ್ಷಣ ನಡೆಸಬೇಕು.
ರಸಗೊಬ್ಬರ, ಕ್ರಿಮಿನಾಶಕ, ಬೀಜ, ಪಂಪಸೆಟ್ ಸೇರಿದಂತೆ ಎಲ್ಲಾ ಕೃಷಿ ಪರಿಕರಗಳ ಗುಣಮಟ್ಟ ಪರೀಕ್ಷಾ ತಂಡ ರಚಿಸಬೇಕು.
ಸರ್ಕಾರವು ತಕ್ಷಣ NDRF ಮತ್ತು SDRF ಅಡಿಯಲ್ಲಿ ಪರಿಹಾರ ಒದಗಿಸಿ, ವಿಮೆ ಮೊತ್ತ ಬಿಡುಗಡೆ ಮಾಡಬೇಕು ಹಾಗೂ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸುದ್ದಿ ಓದಿದ್ದಿರಾ ? ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರ್ಕಾರ ಸ್ಪಂದಿಸುವುದೇ?
ಈ ಸಂದರ್ಭದಲ್ಲಿ ಭಾರತೀಯ ಕೃಷಿಕ ಸಮಾಜ (ಸಂ) ಕರ್ನಾಟಕ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷರು, ಸದಸ್ಯರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.