ಬೆಳಗಾವಿ ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿನ ವಿಶೇಷಚೇತನ ಮಗುವನ್ನು ಇಟಲಿ ದೇಶದ ದಂಪತಿಗಳು ಸೋಮವಾರ ದತ್ತು ಪಡೆದು ಮಾನವಿಯತೆಗೆ ಸಾಕ್ಷಿಯಾಗಿದ್ದಾರೆ.
ಇಟಲಿಯ ಪ್ಲಾರೆನ್ಸ್ ನಗರದ ನಿವಾಸಿಗಳಾದ ಕೋಸ್ತಾಂಜಾ ಹಾಗೂ ಬುಜಾರ್ ಡೆಡೆ ದಂಪತಿ ದತ್ತು ಪಡೆದವರು, ದತ್ತು ಪಡೆದ ಎರಡೂವರೆ ವರ್ಷದ ಮಗುವಿಗೆ ಆನಂದ ಎಂದು ಹೆಸರಿಡಲಾಗಿದೆ. ಈ ಮಗು ಅವಧಿಪೂರ್ವ ಜನಿಸಿತ್ತು. ಆಗ 1.3 ಕೆಜಿ ತೂಕ ಮಾತ್ರ ಇತ್ತು. ದೃಷ್ಟಿದೋಷವೂ ಸೇರಿ ಆರೋಗ್ಯದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೆತ್ತವರು ಬಿಟ್ಟುಹೋದ ಹಸುಳೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ರಕ್ಷಣೆ ಮಾಡಿದ್ದರು. ಎರಡೂವರೆ ವರ್ಷಗಳಿಂದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಪೋಷಣೆ ಮಾಡಲಾಗಿದೆ.
ಆದರೆ, ಕೋಸ್ತಾಂಜಾ ಹಾಗೂ ಬುಜಾರ್ ಡೆಡೆ ದಂಪತಿ ವಿಶೇಷಚೇತನ ಮಗುವಿಗೆ ಹೊಸಬಾಳು ನೀಡಲು ಬಂದಿದ್ದಾರೆ. ತಮಗೆ ಮಕ್ಕಳಾಗಲಿಲ್ಲ ಎಂದು ಕೊರಗದೇ, ವಿಶೇಷ ಚೇತನ ಮಗುವೊಂದನ್ನು ಪೋಷಣೆ ಮಾಡಲು ಮುಂದಾಗಿದ್ದು ಪ್ರಶಂಸನೀಯ’ ಎಂದು ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಡಾ.ಮನಿಷಾ ಭಾಂಡನಕರ್ ತಿಳಿಸಿದರು.
‘ಈ ದಂಪತಿ ಆರು ವರ್ಷಗಳ ಹಿಂದೆ ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದರು. ‘ಕಾರಾ’ ನಿಯಮ (ಸೆಂಟ್ರಲ್ ಅಡಾಪ್ಟನ್ ರಿಸೋರ್ಸ್ ಅಥಾರಿಟಿ)ದಂತೆ ಎಲ್ಲವನ್ನೂ ಪರಿಶೀಲಿಸಿ, ಸಂದರ್ಶನ ಮಾಡಿ ಮಗು ದತ್ತು ನೀಡಲಾಗಿದೆ. ಮಂಗಳವಾರ (ಫೆ.18) ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಗುವನ್ನು ಹಸ್ತಾಂತರಿಸಲಾಗುವುದು’ ಎಂದು ಅವರು ಹೇಳಿದ್ದಾರೆ.