ಬೆಳಗಾವಿ ಜಿಲ್ಲೆಯ ಸಹಕಾರಿ ಸಂಘಗಳ ಚುನಾವಣಾ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಮದ್ಯ, ಮಾಂಸ ಸೇರಿದಂತೆ ಬಾಡೂಟಗಳು ಜೋರಾಗಿ ನಡೆಯುತ್ತಿರುವುದಾಗಿ ಮಾಜಿ ಸಂಸದ ರಮೇಶ್ ಕತ್ತಿ ಗಂಭೀರ ಆರೋಪ ಮಾಡಿದ್ದಾರೆ.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಸಹೋದರರು ಯುವಕರನ್ನು ಕೆಟ್ಟ ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಗ್ರಾಮೀಣ ಸಂಸ್ಕಾರ ಹಾಳಾಗುತ್ತಿದೆ ಎಂದು ಟೀಕಿಸಿದರು.
ಅವರು ಮುಂದುವರಿದು, ನವರಾತ್ರಿ ಸಮಯದಲ್ಲಿ ಮನೆಮನೆಗಳಲ್ಲಿ ದೇವರಿಗೆ ದೀಪ ಹಚ್ಚಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮತದಾರರಿಗೆ ಮದ್ಯ ಮಾಂಸ ಬಡಿಸುವವರನ್ನು ದುರ್ಗಾದೇವಿಯೇ ಸರಿಯಾದ ಬುದ್ಧಿ ಕಲಿಸುತ್ತಾಳೆ. ನಮ್ಮ ಕ್ಷೇತ್ರದಲ್ಲಿ ಇಷ್ಟು ವರ್ಷಗಳಿಂದ ಚುನಾವಣೆ ನಡೆದರೂ ಬಾಡೂಟದ ಸಂಸ್ಕೃತಿ ಇರಲಿಲ್ಲ ಎಂದು ಹೇಳಿದರು.
ಮತದಾರರಿಗೆ ಕರೆ ನೀಡಿದ ಅವರು, ಬೇರೆಯವರ ಜಮೀನಿನಲ್ಲಿ ಕುರಿ–ಕೋಳಿ ಜೀವ ತೆಗೆಯುತ್ತ ಬಾಡೂಟಕ್ಕೆ ಹೋಗಬೇಡಿ. ಮನೆಯಲ್ಲಿನ ಸಂಸ್ಕಾರವನ್ನು ಕಾಪಾಡಿಕೊಳ್ಳಿ. ದುರ್ಗಾದೇವಿ ಆರಾಧನೆಯ ಸಮಯದಲ್ಲಿ ಉಪವಾಸ ಮತ್ತು ಭಕ್ತಿಯೇ ಮುಖ್ಯ ಎಂದು ಒತ್ತಿ ಹೇಳಿದರು.
ರಮೇಶ್ ಕತ್ತಿ ಕೊನೆಯಲ್ಲಿ, ಮದ್ಯ–ಮಾಂಸ ಬಾಡೂಟಗಳ ಮೂಲಕ ಮತದಾರರನ್ನು ದಾರಿ ತಪ್ಪಿಸುವ ಕುತಂತ್ರಿಗಳಿಗೆ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದು ಕಿಡಿಕಾರಿದರು.