ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುದಾನ ತಂದಿರುವ ಕ್ರೆಡಿಟ್ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರಿಗೆ ಸಲ್ಲಬೇಕೇ ವಿನಃ ಸಂಸದ ಜಗದೀಶ ಶೆಟ್ಟರ್ ಗೆ ಅಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯ ಗೃಹ ಕಚೇರಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದವರು. ಸಾಮಾನ್ಯ ಜ್ಞಾನವಾದರೂ ಬೇಕಲ್ಲ, ಅವರು ಸಂಸದರಾದ ತಕ್ಷಣ ಪತ್ರ ಕೊಟ್ಟು ಬಿಟ್ಟರೆ ನೂರಾರು ಕೋಟಿ ರೂ. ಕೊಟ್ಟು ಬಿಡುತ್ತಾರಾ? ಮುಖ್ಯಮಂತ್ರಿಗಳಾಗಿದ್ದವರಿಗೆ ಈ ಕುರಿತು ಜ್ಞಾನವಿರಬೇಕಲ್ಲ. ಬಾಯಿ ಇದೆ ಎಂದು ಏನೇ ಮಾತನಾಡಿದರೂ ನಡೆಯುತ್ತಾ? ಅವರು ಸಂಸದರಿದ್ದಾರೆ, ತಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಕೇಳಿದರೆ ಒಪ್ಪೋಣ, ಅದು ಬಿಟ್ಟು ನಾನು ಅನುದಾನ ತಂದಿದ್ದೇನೆ ಎಂದರೆ ಹೇಗೆ? ಅವರಿಗೆ ತಾಕತ್ತಿದ್ದರೆ ಜಿಲ್ಲೆಯಲ್ಲಿ ಸಾಕಷ್ಟು ದೇವಸ್ಥಾನಗಳಿವೆ, ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಎಚ್.ಕೆ.ಪಾಟೀಲರ ಮನೆ ದೇವರು ಸವದತ್ತಿ. ಅವರು ಸವದತ್ತಿ ಅಭಿವೃದ್ಧಿಗೆ ಯೋಜನ ರೂಪಿಸಿ, ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನದಿಂದ ಅನುದಾನ ಬಂದಿದೆ. ಅದರ ಸಂಪೂರ್ಣ ಶ್ರೇಯಸ್ಸು ಎಚ್.ಕೆ.ಪಾಟೀಲ ಅವರಿಗೆ ಸಲ್ಲಬೇಕೇ ವಿನಃ ಜಗದೀಶ್ ಶೆಟ್ಟರ್ ಗೆ ಅಲ್ಲ ಎಂದು ಹೆಬ್ಬಾಳಕರ್ ಸ್ಪಷ್ಟಪಡಿಸಿದರು.