ಬೆಳಗಾವಿ ಜಿಲ್ಲೆಯ ಖಾನಾಪುರದ ಗಾಂಧೀನಗರ ಮಾರುತಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ನಡೆದ ಸಂಧಾನ ಸಭೆಯಲ್ಲಿ ಹಲಕರ್ಣಿ ಗ್ರಾಮದ ಸುರೇಶ ಭೀಮಪ್ಪ ಬಂಡಿವಡ್ಡರ (36) ಅವರನ್ನು ಹತ್ಯೆ ಮಾಡಲಾಗಿದೆ.
ಹಳೆಯ ವೈಷಮ್ಯ ಬಗೆಹರಿಸಲು ನಡೆದ ಸಭೆಯಲ್ಲಿ ಗಾಂಧೀನಗರದ ಯಲ್ಲಪ್ಪ ಬಂಡಿವಡ್ಡರ (62) ಚಾಕುವಿನಿಂದ ಸುರೇಶ ಅವರ ಹೊಟ್ಟೆಗೆ ಇರಿದು ಗಂಭೀರವಾಗಿ ಗಾಯಗೊಳಿಸಿದರು. ಆಸ್ಪತ್ರೆಗೆ ಸಾಗಿಸುವಾಗ ಸುರೇಶ ಮೃತಪಟ್ಟರು.
ಜಗಳ ಬಿಡಿಸಲು ಯತ್ನಿಸಿದ ಸಾಗರ ಅಷ್ಟೇಕರ ಅವರಿಗೂ ಗಾಯಗಳಾಗಿವೆ. ಹತ್ಯೆಯ ಬಳಿಕ ಯಲ್ಲಪ್ಪ ಸ್ವಯಂ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಖಾನಾಪುರ ಠಾಣೆಯಲ್ಲಿ ದಾಖಲಾಗಿದೆ.