ನಗರದಲ್ಲಿ ನಡೆಯಲಿರುವ ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯ ವೇಳೆ ಪೊಲೀಸ್ ಇಲಾಖೆ ಹೊರಡಿಸಿರುವ ಹೊಸ ಷರತ್ತುಗಳಿಗೆ ಶಾಸಕ ಅಭಯ ಪಾಟೀಲ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಅನಗತ್ಯ ನಿಯಮಾವಳಿ ಹೇರಲಾಗುತ್ತಿದ್ದು, ಗಣೇಶೋತ್ಸವ ಮಂಡಳಿಗಳಿಗೆ ತೊಂದರೆ ಉಂಟುಮಾಡುವ ರೀತಿಯ ನಿಯಮಗಳನ್ನು ಅನುಸರಿಸಬಾರದು ಎಂದು ಹೇಳಿದರು.
ಸಭೆಯಲ್ಲಿ ಪೊಲೀಸರು ಒಟ್ಟು 40 ಗಣೇಶ ಮಂಡಳಿಗಳ ಮೆರವಣಿಗೆಯ ಮಾರ್ಗ ಬದಲಾವಣೆ, ಪಟಾಕಿ ಹಾರಿಸಲು ನಿಷೇಧ, ವಾದ್ಯಮೇಳಗಳಿಗೆ ನಿರ್ದಿಷ್ಟ ಪ್ರದೇಶದವರೆಗೆ ಮಾತ್ರ ಅವಕಾಶ, ಹಾಗೆಯೇ ಯಾವುದೇ ಅಶಾಂತಿ ಉಂಟಾದರೆ ಆಯೋಜಕರು ಹೊಣೆ ಎಂಬಂತೆ ಖಾಲಿ ಬಾಂಡ್ ಪೇಪರ್ ಮೇಲೆ ಸಹಿ ಪಡೆಯುವುದು ಮುಂತಾದ ಷರತ್ತುಗಳನ್ನು ಪ್ರಕಟಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಭಯ ಪಾಟೀಲ, “ಬೆಳಗಾವಿಯಲ್ಲಿ ಈ ತರಹ ಹೊಸ ಷರತ್ತುಗಳು ಬೇಡ. ಯಾರಿಗೆ ನಿಯಮಗಳು ಒಪ್ಪಿಗೆ ಇದೆ ಅವರು ಪಾಲಿಸಬಹುದು. ಆದರೆ ಬಲವಂತವಾಗಿ ಮಾರ್ಗ ಬದಲಾವಣೆ ಮಾಡಿಸುವುದು, ಪಟಾಕಿ ನಿಷೇಧಿಸುವುದು ಸರಿಯಲ್ಲ. ಈ ಬಗ್ಗೆ ನಾವು ಕಮೀಷನರ್ ಅವರನ್ನು ಭೇಟಿಯಾಗಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ” ಎಂದು ತಿಳಿಸಿದರು.
ಗಣೇಶೋತ್ಸವ ಮಂಡಳಿಗಳು ಕೂಡ ಪೊಲೀಸರು ವಿಧಿಸಿರುವ ನಿಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಚರ್ಚೆ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.