ರಾಜ್ಯದಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧಿಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಆಪ್ತರು ಅಧಿಕಾರದಲ್ಲಿದ್ದರು. ಕಳೆದ ಕೆಲವು ದಿನಗಳ ಹಿಂದೆ ನಡೆದ ಬೆಳವಣಿಗೆಯಲ್ಲಿ ಮಾಜಿ ಅಧ್ಯಕ್ಷ ಸಂತೋಷ ಕಕಮರಿ ಅವಿಶ್ವಾಸ ನಿರ್ಣಯದಲ್ಲಿ ಸೋಲು ಅನುಭವಿಸುವಂತಾಯಿತು.
ಗುರುವಾರ ಗ್ರಾಮ ಪಂಚಾಯತ್ ಅಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗ ಶಂಕರ ರಾಮು ಗಡದೆ ಹಾಗೂ ಸಂತೋಷ ಕಕಮರಿ ನಾಮಪತ್ರ ಸಲ್ಲಿಸಿದ್ದರು. ಈ ಚುನಾವಣೆಯಲ್ಲಿ 53 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ್ದು, ಶಂಕರ ಗಡದೆ ಇವರಿಗೆ 43 ಮತಗಳು ಹಾಗೂ ಪರಾಭವಗೊಂಡ ಸಂತೋಷ ಕಕಮರಿ ಇವರಿಗೆ 10 ಮತಗಳು ಬಂದ ಪರಿಣಾಮ ಶಂಕರ ಗಡದೆ 33 ಮತಗಳಿಂದ ಗಸಂಕೋನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.