ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಗಾಂಧಿನಗರದಲ್ಲಿ ರವಿವಾರ ನಡೆದ ಸಂಧಾನ ಸಭೆಯ ಮಧ್ಯೆ 32 ವರ್ಷದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಪತ್ನಿಯೊಂದಿಗೆ ಅನುಚಿತ ಸಂಬಂಧ ಹೊಂದಿದ್ದ ಸ್ಥಳೀಯ ಯುವಕನ ವಿರುದ್ಧ ಮೃತ ಯುವಕ ತನ್ನ ಆಕ್ರೋಶ ವ್ಯಕ್ತಪಡಿಸಿದ್ದನ್ನು ಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಘಟನೆಯ ಸಂಬಂಧ ಮೂವರು ಆರೋಪಿಗಳನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಮೃತ ವ್ಯಕ್ತಿ ಧಾರವಾಡ ಜಿಲ್ಲೆಯ ತೇಗೂರ ಗ್ರಾಮದ ಮೂಲ ನಿವಾಸಿ ಸುರೇಶ್ ತಿಮ್ಮಣ್ಣ ಬಂಡಿವಡ್ಡರ (32). ಇತ್ತೀಚೆಗೆ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಖಾನಾಪುರದ ಗಾಂಧಿನಗರದಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಸುರೇಶ್ ಅವರ ಪತ್ನಿಯೊಂದಿಗೆ ಗಾಂಧಿನಗರದ ನಿವಾಸಿ ಅನಿಲ್ ಬಂಡಿವಡ್ಡರ್ (25) ಎಂಬವನಿಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ಕಾರಣದಿಂದ ಸುರೇಶ್ ಹಾಗೂ ಅನಿಲ್ ನಡುವೆ ಹಲವು ದಿನಗಳಿಂದ ವೈಷಮ್ಯವಿದ್ದು, ಇವರ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಗೆಹರಿಸಲು ರವಿವಾರ ಗಾಂಧಿನಗರದ ಶನಿ-ಮಾರುತಿ ಮಂದಿರದಲ್ಲಿ ಗ್ರಾಮಸ್ಥರು ಸಂಧಾನ ಸಭೆ ಏರ್ಪಡಿಸಿದ್ದರು.
ಸಭೆಯ ವೇಳೆ ಮಾತಿಗೆ ಮಾತು ಬೆಳೆದು, ವಿರೋಧಕ್ಕೆ ತಿರುಗಿದ ಮಾತುಕತೆಯ ಮಧ್ಯೆ ಅನಿಲ್, ಅವನ ತಂದೆ ಯಲ್ಲಪ್ಪ ಬಂಡಿವಡ್ಡರ್ (60) ಹಾಗೂ ತಾಯಿ ಸಾವಿತ್ರಿ ಬಂಡಿವಡ್ಡರ್ (55) ಸೇರಿ ಸುರೇಶ್ ಮೇಲೆ ಹಲ್ಲೆ ನಡೆಸಿದರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯಲ್ಲಪ್ಪ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಇರಿದ ಪರಿಣಾಮ ಸುರೇಶ್ ಬಡಿದಿದ್ದ ಜಾಗದಲ್ಲೇ ಗಂಭೀರವಾಗಿ ಗಾಯಗೊಂಡರು.
ತಕ್ಷಣ ಅವರನ್ನು ಖಾನಾಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಅವರು ಸಾವನ್ನಪ್ಪಿದರು.
ಘಟನೆಯ ಸಂದರ್ಭದಲ್ಲೇ ಮಧ್ಯೆ ಪ್ರವೇಶಿಸಿ ಜಗಳ ನಿವಾರಣೆಗೆ ಮುಂದಾದ ಸುರೇಶ್‌ನ ಸ್ನೇಹಿತ ಸಾಗರ್ ಅಷ್ಟೇಕರ್ಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಬೈಲಹೊಂಗಲ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು (ಡಿವೈಎಸ್‌ಪಿ) ವಿರೇಶ್ ಹಿರೇಮಠ, ಹಾಗೂ ಖಾನಾಪುರ ಠಾಣೆ ಪಿಎಸ್‌ಐ ಎಲ್.ಎಫ್ ಗೌಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿ, ಪ್ರಕರಣದ ತನಿಖೆ ಮುಂದುವರೆದಿದೆ.
ಘಟನೆಯ ಬಳಿಕ ಯಲ್ಲಪ್ಪ ಬಂಡಿವಡ್ಡರ್ ಕೊಲೆ ಮಾಡಿದ ಚಾಕುವಿನೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪ್ರಕರಣದಲ್ಲಿ ಆರೋಪಿತರು ಪೋಲೀಸರ ತನಿಖೆಗೂ ಸಹಕಾರ ನೀಡುತ್ತಿದ್ದಾರೆ.