ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ₹9.95 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ನ್ಯಾಯಾಲಯ ಕಟ್ಟಡವನ್ನು ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರು ಉದ್ಘಾಟಿಸಿದರು. “ಈ ನ್ಯಾಯಾಲಯದ ಸದುಪಯೋಗದಿಂದ ಇಲ್ಲಿನ ಜನರಿಗೆ ನ್ಯಾಯ ದೊರಕಬೇಕು,” ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಮುದಗಲ್ ಮಾತನಾಡುತ್ತಾ, “ರಾಮದುರ್ಗ ನ್ಯಾಯಾಲಯದಲ್ಲಿ 2500ಕ್ಕೂ ಹೆಚ್ಚು ಹಳೆಯ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಇತ್ಯರ್ಥಗೊಳಿಸಲು 30 ವರ್ಷಗಳಷ್ಟು ಸಮಯ ಬೇಕಾಗಬಹುದು. ವಕೀಲರು ಮತ್ತು ನ್ಯಾಯಮೂರ್ತಿಗಳು ಸಹಕರಿಸಿದರೆ ಈ ಕಾರ್ಯ ವೇಗವಾಗಬಹುದು, ವಕೀಲರು ಬುದ್ಧಿವಂತಿಕೆಯಷ್ಟೇ ಅಲ್ಲ, ಹೃದಯವಂತಿಕೆಯಿಂದ ಕೂಡಿರಬೇಕು. ಯಾವುದೇ ಒಳಒಪ್ಪಂದಗಳಿಲ್ಲದೆ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿ, “ನ್ಯಾಯಾಂಗ ವ್ಯವಸ್ಥೆ ಶಕ್ತಿಯುತವಾಗಿದ್ದರೆ ದೇಶ ಶಾಂತಿಯುತವಾಗಿರುತ್ತದೆ. ನ್ಯಾಯಾಂಗಕ್ಕೆ ಮೂಲ ಸೌಲಭ್ಯ ಒದಗಿಸಲು ಸರ್ಕಾರ ಯಾವತ್ತೂ ಆದ್ಯತೆ ನೀಡಿದೆ,” ಎಂದು ಹೇಳಿದರು.
“ಲೋಕಾಪೂರ-ರಾಮದುರ್ಗ-ಧಾರವಾಡ ರೈಲು ಮಾರ್ಗದ ಸಮೀಕ್ಷೆಗೆ ಕೇಂದ್ರ ರೈಲ್ವೆ ಸಚಿವರು ಒಪ್ಪಿಗೆ ನೀಡಿದ್ದಾರೆ. ಇದರಿಂದ ಯಾತ್ರಾರ್ಥಿಗಳಿಗೆ ಸುಲಭ ಪ್ರಯಾಣ ಸಾಧ್ಯವಾಗಲಿದೆ,” ಎಂದರು.
ಈ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಚಿನ್ ಮಗದುಮ್, ರಾಮಚಂದ್ರ ಹುದ್ದಾರ, ವಿಜಯಕುಮಾರ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ರಮೇಶ ಹಲ್ಯಾಳ, ಪಿಡಬ್ಲ್ಯುಡಿ ಅಧಿಕಾರಿ ರವಿಕುಮಾರ ನಂದಿಹಳ್ಳಿ, ನ್ಯಾಯಾಧೀಶ ಟಿ.ಎನ್. ಇನವಳ್ಳಿ ಮತ್ತು ಇತರ ಗಣ್ಯರು ಭಾಗವಹಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀನಿವಾಸ ಕುರಡಗಿ ಮತ್ತು ರಶ್ಮಿ ಕುಲಕರ್ಣಿ ಮಾಡಿದರು. ವಿ.ಬಿ. ಸದಾಟಗಿಮಠ ವಂದಿಸಿದರು.