ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.
23 ವರ್ಷದ ಜ್ಯೋತಿ ಕಾಂಬಳೆ ಮೃತಪಟ್ಟ ದುರ್ದೈವಿ. ಮೂರು ವರ್ಷಗಳ ಹಿಂದೆ ಹಣಮಂತ ಕಾಂಬಳೆ ಅವರೊಂದಿಗೆ ವಿವಾಹವಾಗಿದ್ದ ಜ್ಯೋತಿ, ಮದುವೆಯಾದ ಆರಂಭದಲ್ಲಿ ಕೇವಲ ಮೂರು ದಿನಗಳ ಕಾಲ ಮಾತ್ರ ಗಂಡನ ಮನೆಯಲ್ಲಿ ಇದ್ದು, ಅಲ್ಲಿನವರ ಕಿರುಕುಳ ತಾಳಲಾರದೆ ತವರು ಮನೆಗೆ ಮರಳಿದ್ದರು.
ಸುಮಾರು ಎರಡು ವರ್ಷಗಳ ಕಾಲ ತವರು ಮನೆಯಲ್ಲೇ ವಾಸಿಸುತ್ತಿದ್ದ ಜ್ಯೋತಿಯನ್ನು ಇತ್ತೀಚೆಗೆ ಗಂಡನ ಮನೆಯವರು ಮನವೊಲಿಸಿ ಮತ್ತೆ ಕರೆದುಕೊಂಡು ಹೋಗಿದ್ದರು. ಆದರೆ ಗಂಡನ ಮನೆಗೆ ಮರಳಿದ ಕೇವಲ ಮೂರನೇ ದಿನವೇ ಜ್ಯೋತಿ ಶವವಾಗಿ ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನ ಹುಟ್ಟಿಸಿದೆ.
ಈ ಸಾವು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದರೂ, ಮೃತಳ ಕುಟುಂಬಸ್ಥರು ಇದನ್ನು ತಳ್ಳಿಹಾಕಿದ್ದಾರೆ. ಗಂಡನ ಮನೆಯವರೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ.




