ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೀರನ್ನು ಬಿಡದಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಇದರ ಕಾಮಗಾರಿ ಇನ್ನೂ ನಡೆಯುತ್ತಿದೆ. ಕೈಗಾರಿಕಾ ಅಗತ್ಯಕ್ಕಾಗಿ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಕುರಿತು ನೀರಾವರಿ ನಿಗಮದ ಅಧಿಕಾರಿಗಳು ಮೊದಲಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ಮಟ್ಟದ ಸಮಿತಿಯು 0.5 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲು ತೀರ್ಮಾನಿಸಿದೆ,” ಈ ನಿರ್ಧಾರವನ್ನು ಗೌರವಿಸಿ, ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸಬಾರದು ಎಂಬ ಜವಾಬ್ದಾರಿ ಅಧಿಕಾರಿಗಳ ಮೇಲಿದೆ, ಎಂದು ಅವರು ಹೇಳಿದರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 24×7 ಮಾದರಿಯಲ್ಲಿ ಕುಡಿಯುವ ನೀರು ಪೂರೈಸುವ ಸಂಬಂಧ ಜಲಾಶಯದಿಂದ ಹೆಚ್ಚಿನ ನೀರಿನ ಬೇಡಿಕೆ ಇರುವ ಪ್ರಸ್ತಾಪದ ಬಗ್ಗೆ ಮಾತನಾಡುತ್ತಾ, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.