ದನದ ಕೊಟ್ಟಿಗೆ ನಿರ್ಮಾಣಕ್ಕೆ ಮಂಜೂರಾದ ಹಣ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಮಾ ಮಾಡದ ಕಾರಣ ರೈತ ಸತೀಶ ಕೋಳಿ ಅವರು ಬೆಳಗಾವಿ ಜಿಲ್ಲೆಯ ಸಂಬರಗಿ ಗ್ರಾಮ ಪಂಚಾಯಿತಿ ಕಚೇರಿ ಒಳಗೆ ಎಮ್ಮೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ದನದ ಕೊಟ್ಟಿಗೆ ನಿರ್ಮಾಣಕ್ಕೆ ವರ್ಷದ ಹಿಂದೆಯೇ ಸಂಬರಗಿ ಗ್ರಾಮ ಪಂಚಾಯಿತಿಯಿಂದ ನನಗೆ ನೆರವಿನ ಹಣ ಮಂಜೂರಾಗಿದೆ. ₹50 ಸಾವಿರ ವೆಚ್ಚದಲ್ಲಿ ಕೊಟ್ಟಿಗೆ ಕಟ್ಟಿ ವರ್ಷವಾದರೂ ಹಣ ನೀಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿಮಗೆ ಮಂಜೂರು ಮಾಡಿರುವ ಯೋಜನೆ ರದ್ದಾಗಿದೆ ಎಂದು ಹೇಳುತ್ತಾರೆ’ ಎಂದು ರೈತ ಸತೀಶ ದೂರಿದ್ದಾರೆ. ಅಧಿಕಾರಿ ನೀಡಿದ ಭರವಸೆ ಮೇರೆಗೆ ಅವರು ಎಮ್ಮೆಯನ್ನು ಮನೆಗೆ ಒಯ್ದರು.
ಗ್ರಾಮ ಪಂಚಾಯಿತಿಯಲ್ಲಿ ಎಮ್ಮೆ ಕಟ್ಟಿದ ರೈತ, ಅಲ್ಲೇ ಮೇವು ಹಾಕಿದರು. ಗಂಟೆಗಟ್ಟಲೇ ಎಮ್ಮೆಯನ್ನು ಅಲ್ಲೇ ಮಲಗಿಸಿದರು. ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ರೈತನಿಗೆ ಭರವಸೆ ನೀಡಿ ಮನೆಗೆ ಕಳುಹಿಸಿದ್ದಾರೆ.