ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ತಾಯಿ ಮತ್ತು ಮಗನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ದೃಢತೆಯೊಂದಿಗೆ, ಮತ್ತೊಬ್ಬ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಭಾನುವಾರ ಚಂದ್ರವ್ವ ಅಪ್ಪಾರಾಯ ಇಚೇರಿ (62) ಮತ್ತು ವಿಠಲ್ ಅಪ್ಪಾರಾಯ ಇಚೇರಿ (42) ಎಂಬ ತಾಯಿ-ಮಗರನ್ನು ಕಬ್ಬಿನ ತೋಟದಲ್ಲಿ ಬರ್ಬರವಾಗಿ ಕೊಲೆ ಮಾಡಿ ಮೃತದೇಹಗಳನ್ನು ಎಸೆದ ಘಟನೆಯು ಸ್ಥಳೀಯರಲ್ಲಿಯೇ ಭಯಚಕಿತವನ್ನುಂಟುಮಾಡಿತ್ತು. ಪ್ರಕರಣದ ತೀವ್ರತೆಗೆ ತ್ವರಿತವಾಗಿ ಸ್ಪಂದಿಸಿದ ಅಥಣಿ ಪೊಲೀಸರು ತನಿಖೆ ಆರಂಭಿಸಿ, ಶೀಘ್ರವೇ ಪ್ರಮುಖ ಆರೋಪಿಗಳ ಬಗ್ಗೆ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶೇಗುಣಸಿ ಗ್ರಾಮದ ಸುರೇಶ್ ರಾಮಪ್ಪ ಸವದತ್ತಿ ಮೃತ ಚಂದ್ರವ್ವನ ತಂಗಿಯ ಮಗಳ ಗಂಡ, ಪ್ರಕರಣದ ಪ್ರಮುಖ ಆರೋಪಿ ಎಂಬುದು ತಿಳಿದುಬಂದಿದೆ. ಆರೋಪಿಗೆ ಸಂಬಂಧಿಸಿದ ಮಾಹಿತಿ ಗ್ರಾಮದಲ್ಲಿ ಹರಡುತ್ತಿದ್ದಂತೆ, ಸುರೇಶ್ ತಲೆಮರೆಸಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದೇ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಶ್ರೀಶೈಲ ಹೊರಟ್ಟಿ ಕೂಡ ತೋಟದಲ್ಲಿ ತಲೆಮರೆಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ವೇಳೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಕಠಿಣ ಪರಿಶ್ರಮ ವಹಿಸಿದ ಅಥಣಿ ಪೊಲೀಸರ ಕಾರ್ಯಾಚರಣೆಗೆ ಪೋಲಿಸ್ ವರಿಷ್ಟಾಧಿಕಾರಿ ಭೀಮಾಶಂಕರ ಗುಳೆದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ