ಮರಾಠಿ ಬರಲ್ಲ ಎಂದಿದ್ದಕ್ಕೆ ಹಲ್ಲೆಗೊಳಗಾಗಿದ್ದ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಹಲ್ಲೆಗೊಳಗಾದ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, “ಕಂಡಕ್ಟರ್ ಮಹಾದೇವ ಅವರು ಬಸ್‌ನಲ್ಲಿ ಬಾಲಕಿಯೊಬ್ಬಳನ್ನು ಕೆಟ್ಟ ದೃಷ್ಟಿಯಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶನಿವಾರ ಬೆಳಗ್ಗೆ 2:30ರ ವೇಳೆಗೆ ಬಾಲಕಿಯಿಂದ ದೂರು ದಾಖಲಾಗಿದೆ” ಎಂದರು.
ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಡಕ್ಟರ್ ಮಹಾದೇವ್, “ನನ್ನ ವಿರುದ್ಧ ದೂರು ನೀಡಿರುವ ಹುಡುಗಿಯಷ್ಟು ಪ್ರಾಯದ ಮಗಳಿದ್ದಾಳೆ. ಪ್ರಕರಣದ ದಿಕ್ಕು ತಪ್ಪಿಸಲು ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಪೋಕ್ಸೋ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೂ ಪ್ರಸ್ತಾಪವೇ ಆಗಿಲ್ಲ. ಆದರೆ ನಿರ್ವಾಹಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಾತ್ರೋರಾತ್ರಿ ಪೋಕ್ಸೋ ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.
ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಫೈನಾನ್ಸ್ ಸಾಲಬಾಧೆಯಿಂದ ಕಾರ್ಮಿಕ ಸಾವು
ಇನ್ನು ಕರ್ನಾಟಕದಲ್ಲಿ ಕನ್ನಡ ಮಾತನಾಡಿ ಎಂದಿದ್ದಕ್ಕೆ ಮರಾಠಿ ಭಾಷಿಕರು ನಿರ್ವಾಹಕರ ಹಲ್ಲೆ ಮಾಡಿದ ಕೃತ್ಯವನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
