ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರದ ಬಳಿ ಇರುವ ಜಮೀನಿನಲ್ಲಿ ಅಣ್ಣನನ್ನು ಕೊಲೆ ಮಾಡಿದ ಸಹೋದರನ್ನು ಪೋಲಿಸರು ಬಂಧಿಸಿದ್ದಾರೆ.
ಕುರಿಗಾಹಿಯಾಗಿದ್ದ ರಾಯಪ್ಪ ಮೇ 8ರಂದು ಕುರಿ ಮೇಯಿಸಲು ಪಾಶ್ಚಾಪುರ ಬಳಿಯ ಜಮೀನಿಗೆ ತೆರಳಿದ್ದರು. ಕುರಿಗಳು ಮನೆಗೆ ಮರಳಿದವು. ಆದರೆ, ರಾಯಪ್ಪ ಬಾರದ್ದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದರು. ಮಾರನೇ ದಿನ ಹತ್ಯೆಗೀಡಾದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ಕೆಲ ಸುಳಿವು ಆಧರಿಸಿ, ಯಮಕನಮರಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಬಸವರಾಜನೇ ಕೊಲೆ ಮಾಡಿರುವುದು ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕುವೈತ್‌ನ ನ್ಯಾಷನಲ್ ಪೆಟ್ರೋಲಿಯಂ ಕಂಪನಿಯಲ್ಲಿ ವಾಲ್ ಆಪರೇಟರ್ ಆಗಿ ಕೆಲಸ ಮಾಡಿದ್ದ ಬಸವರಾಜನು ಹಟ್ಟಿಆಲೂರಿಗೆ ಮರಳಿದ್ದ. ಸದ್ಯ ಯಾವ ಕೆಲಸ ಮಾಡದೆ ಮನೆಯಲ್ಲೇ ಉಳಿದಿದ್ದ. ಇದರಿಂದ ರಾಯಪ್ಪ ಮತ್ತು ಮತ್ತೊಬ್ಬ ಸಹೋದರ ದುಂಡಪ್ಪ ಸಿಟ್ಟಾಗಿದ್ದರು. ಕೆಲಸದ ವಿಚಾರವಾಗಿಯೇ ಪರಸ್ಪರರ ಮಧ್ಯೆ ಜಗಳವಾಗುತ್ತಿತ್ತು. ಕೊಲೆ ನಡೆದ ದಿನ ಮತ್ತು ಹಿಂದಿನ ದಿನವೂ ಮನೆಯಲ್ಲಿ ಗಲಾಟೆಯಾಗಿತ್ತು. ಇದರಿಂದ ಆಕ್ರೋಶಗೊಂಡ ಬಸವರಾಜನು ಕುರಿ ಮೇಯಿಸಲು ಹೋಗಿದ್ದ ಅಣ್ಣನ ಹತ್ಯೆ ಮಾಡಿದ್ದಾನೆ’ ಎಂದರು.