ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷ್ಯವೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಬಾಣಂತಿಯನ್ನು ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ್ (31) ಎಂದು ಗುರುತಿಸಲಾಗಿದೆ.
ಅಂಜಲಿಗೆ ವೈದ್ಯರು ಜನವರಿ 22ಕ್ಕೆ ಹೆರಿಗೆಗೆ ದಿನಾಂಕ ನೀಡಿದ್ದರು. ಆದರೆ ಹೆರಿಗೆ ನೋವು ಕಾಣಿಸದ ಹಿನ್ನೆಲೆ ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಸೇರಿಯನ್ ಮೂಲಕ ಹೆರಿಗೆ ನಡೆದ ಬಳಿಕ ಅಂಜಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಂಜಲಿ ಕುಟುಂಬಸ್ಥರು ವೈದ್ಯರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಆಗುತ್ತಿರುವ ಬಾಣಂತಿ ಮಹಿಳೆಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು ವೈದ್ಯರು ಮತ್ತು ಜಿಲ್ಲಾಡಳಿತದ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ.