ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೊಡಚಿ ಗ್ರಾಮದಲ್ಲಿ ಸೋಮವಾರ ಮುನವಳ್ಳಿ ಕೊಟುಮಚಗಿಯಿಂದ ಗೊಡಚಿ ಮಾರ್ಗದ ರಸ್ತೆಯ ₹6 ಕೋಟಿ ವೆಚ್ಚದಲ್ಲಿ ಸುಮಾರ 12 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಶೋಕ ಪಟ್ಟಣ “ರಾಜ್ಯ ಕಾಂಗ್ರೆಸ್ ಸರ್ಕಾರ ಮುಖ್ಯ ರಸ್ತೆಗಳ ಜೊತೆಗೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಜಿಲ್ಲಾ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದೆ” ಎಂದು ಹೇಳಿದರು.
“ರಾಮದುರ್ಗ ತಾಲ್ಲೂಕಿನ ರಸ್ತೆಗಳ ಸುಧಾರಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನ ಅವರು ₹25 ಕೋಟಿ ಅನುದಾನ ನೀಡಿದ್ದಾರೆ. ಸಂಚಾರಕ್ಕೆ ಅಡಚಣೆಯಾಗಿರುವ ರಸ್ತೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು” ಎಂದು ಶಾಸಕ ಅಶೋಕ ಪಟ್ಟಣ ತಿಳಿಸಿದ್ದಾರೆ.
“ಕಾಮಗಾರಿ ಬೇಗ ಮುಗಿಸುವ ಅವಸರದಲ್ಲಿ ಮಾಡಿ ಹಾಗೂ ಹೆಚ್ಚಿನ ಲಾಭಕ್ಕಾಗಿ ಗುತ್ತಿಗೆದಾರರು ಕಳಪೆ ಕೆಲಸ ಮಾಡಿದರೆ ಸಹಿಸುವುದಿಲ್ಲ. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಯಾವುದೇ ಸಮಸ್ಯೆಗಳಿದ್ದರೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಯ ಸದಸ್ಯರು ಗಮನ ಹರಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೊಡಚಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಕವ್ವ ವಗ್ಗರ, ಸದಸ್ಯರಾದ ಸಂಗಪ್ಪ ಪಾಕನಟ್ಟಿ, ಶಿವನಗೌಡ ಪಾಟೀಲ, ಈರಣ್ಣ ಕಾಮನ್ನವರ, ಗೊರವ, ಗುರುಬಾಯಿ ಪೂಜೇರ, ಸಾವಿತ್ರಿ ಜಾಮದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಯಪ್ಪ ಕತ್ತಿ, ಜಿ.ಬಿ.ರಂಗನಗೌಡ್ರ, ಶಿದ್ದಿಂಗಪ್ಪ ಸಿಂಗಾರಗೊಪ್ಪ, ಪಿಡಿಒ ಚನ್ನಮ್ಮ ಕೊಪ್ಪದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು