ಬೆಳಗಾವಿ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಹಿನ್ನಲೆಯಲ್ಲಿ ಶುಕ್ರವಾರ ಚನ್ನಮ್ಮನ ಕಿತ್ತೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಚುನಾವಣೆ ಪ್ರಕ್ರಿಯೆಗೆ ಹಾಜರಾಗಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಕಾರಿನಲ್ಲಿ ಕೊಂಡೊಯ್ಯಲು ಯತ್ನಿಸಿದರೆ, ಇದನ್ನು ತಡೆಯಲು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ ಉಗ್ರ ಸ್ವರೂಪ ಪಡೆದು ಕೈಕೈ ಮಿಲಾಯುವ ಮಟ್ಟಕ್ಕೆ ತಲುಪಿದೆ.
ಕಾರಿನ ಗಾಜು ಒಡೆದ ಘಟನೆ ಸಹ ನಡೆದಿದ್ದು, ಕಾರ್ಯದರ್ಶಿಯನ್ನು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಕಾರಿನಿಂದ ಹೊರಗೆಳೆದು ಒಬ್ಬರಿಗೊಬ್ಬರು ಕಾಲರ್ ಹಿಡಿದು ಹೊಡೆದಾಡಿಕೊಂಡಿದ್ದಾರೆ. ಘಟನೆ ಪೊಲೀಸರ ಸಮ್ಮುಖದಲ್ಲಿಯೇ ನಡೆದಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಕೊಂಡ ಹಿನ್ನೆಲೆಯಲ್ಲಿ, ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡಬೇಕಾಯಿತು.
ಅಕ್ಟೋಬರ್ 19ರಂದು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯನ್ನು ನಿಗದಿಪಡಿಸಲಾಗಿದೆ. ಪ್ರತಿಯೊಂದು ಪಿಕೆಪಿಎಸ್ನಿಂದ ಒಬ್ಬ ಪ್ರತಿನಿಧಿಗೆ ಮಾತ್ರ ಮತದಾನ ಹಕ್ಕು ನೀಡಲು ಕೋರಂ ಸಭೆ ಕಡ್ಡಾಯ. ಇದರ ಅಂಗವಾಗಿ ಚನ್ನಮ್ಮನ ಕಿತ್ತೂರಿನಲ್ಲಿ ಶುಕ್ರವಾರ ಕೋರಂ ಚುನಾವಣೆಯನ್ನು ಕರೆಯಲಾಗಿತ್ತು.
“ಕಾಂಗ್ರೆಸ್ ಸದಸ್ಯರ ಸಂಖ್ಯೆ ಕಡಿಮೆ ಇದ್ದುದರಿಂದ ಚುನಾವಣೆ ಮುಂದೂಡುವ ಪ್ರಯತ್ನ ನಡೆದಿದೆ. ಕಾರ್ಯದರ್ಶಿಯನ್ನು ಕಾರಿನಲ್ಲಿ ಅಪಹರಣ ಮಾಡಲು ಯತ್ನಿಸಿದ್ದು, ಇದರಿಂದಲೇ ಗಲಾಟೆ ಉಂಟಾಗಿದೆ,” ಎಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.