ಕುರಿ ಕಾಯುವ ಕೆಲಸಕ್ಕೆ ಪಡೆದಿದ್ದ ಮುಂಗಡ ಹಣದ ವಿಚಾರವಾಗಿ ಉಂಟಾದ ಜಗಳ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದು, ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.
ದೊಡವಾಡ ಗ್ರಾಮದ ಫಕ್ಕೀರಪ್ಪ ಕಿರಕಸಾಲಿ (38) ಕೊಲೆಯಾದ ವ್ಯಕ್ತಿ. ಹಾಲಪ್ಪ ಜವಳಿ (25), ಮಂಜುನಾಥ ತಳವಾರ (28) ಹಾಗೂ ಅರ್ಜುನ ಚೂನಾಪ್ಪಗೊಳ ಬಂಧಿತ ಆರೋಪಿಗಳು.
ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ಫಕ್ಕೀರಪ್ಪ ಅವರ ಶವ ಗ್ರಾಮದ ರುದ್ರವ್ವ ಬಸಪ್ಪ ಹೆಬ್ಬಳ್ಳಿ ಅವರಿಗೆ ಸೇರಿದ ಜೋಳದ ಜಮೀನಿನಲ್ಲಿರುವ ಹುಣಸೆ ಮರದ ಬಳಿ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಪತ್ನಿ ನೀಲಮ್ಮ ಕಿರಕಸಾಲಿ ಅವರು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಫಕ್ಕೀರಪ್ಪ ಕಾಣೆಯಾಗಿದ್ದ ದಿನ ಆರೋಪಿಗಳಾದ ಹಾಲಪ್ಪ ಹಾಗೂ ಮಂಜುನಾಥ ಅವರು ಆತನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿರುವುದು ದೃಢಪಟ್ಟಿದೆ. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಕಾರಣ ಬಹಿರಂಗವಾಗಿದೆ.
ಪೊಲೀಸರ ತನಿಖೆಯ ಪ್ರಕಾರ, ಫಕ್ಕೀರಪ್ಪ ಆರೋಪಿಗಳಿಂದ ಕುರಿ ಕಾಯುವ ಕೆಲಸ ಮಾಡಿಕೊಡುವುದಾಗಿ ಹೇಳಿ ₹10 ಸಾವಿರ ಮುಂಗಡ ಹಣ ಪಡೆದಿದ್ದ. ಆದರೆ ಕೆಲಸವನ್ನು ಮಧ್ಯದಲ್ಲೇ ಬಿಟ್ಟು ಮನೆಗೆ ಮರಳಿದ್ದರಿಂದ ಹಣದ ವಿಚಾರವಾಗಿ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು.
ಮೇ 28ರಂದು ರಾತ್ರಿ ಆರೋಪಿಗಳು ಮತ್ತು ಫಕ್ಕೀರಪ್ಪ ಒಟ್ಟಿಗೆ ಮದ್ಯ ಸೇವಿಸಿ ಊಟ ಮಾಡುತ್ತಿದ್ದ ವೇಳೆ ಮತ್ತೆ ಹಣದ ಮರುಪಾವತಿ ವಿಚಾರ ಪ್ರಸ್ತಾಪವಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಆರೋಪಿಗಳು ಅಲ್ಲಿದ್ದ ಕೊಡಲಿ ಕಾವಿನಿಂದ ಫಕ್ಕೀರಪ್ಪನ ಮೇಲೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗಳಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಜಮೀನಿನಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಹಾಗೂ ಡಿವೈಎಸ್ಪಿ ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶಿವಾನಂದ ಗುಡಗನಟ್ಟಿ ಮತ್ತು ಪಿಎಸ್‌ಐ ಹೆಚ್.ಕೆ. ಪಾಟೀಲ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.




