ವಿದೇಶಿ ನೇರ ಹೂಡಿಕೆ ಮಾನದಂಡಗಳ ಉಲ್ಲಂಘನೆ ಆರೋಪದ ಮೇಲೆ ನ್ಯೂಸ್‌ಕ್ಲಿಕ್ ಮತ್ತು ಅದರ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ದೆಹಲಿ ಹೈಕೋರ್ಟ್‌ನ ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಪೀಠವು ಈ ಪ್ರಕರಣದ ತನಿಖೆಯನ್ನು “ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರ್ಬಳಕೆ” ಎಂದು ಬಲವಾಗಿ ಟೀಕಿಸಿದೆ.
ಈ ಪ್ರಕರಣಗಳನ್ನು ದೆಹಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿವೆ. ನ್ಯೂಸ್‌ಕ್ಲಿಕ್‌ನ ಪೋಷಕ ಕಂಪನಿ ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ 2018-19ರ ಅವಧಿಯಲ್ಲಿ ವಿದೇಶಿ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿ ₹9.59 ಕೋಟಿ ಎಫ್‌ಡಿಐ ಪಡೆದಿದೆ ಎಂದು ಇಒಡಬ್ಲ್ಯೂ ಆರೋಪಿಸಿದೆ. ಎಫ್‌ಐಆರ್ ಆಧರಿಸಿ, ಇಡಿ ಕೂಡ ಪ್ರಕರಣವನ್ನು ದಾಖಲಿಸಿತ್ತು. ದೀರ್ಘಕಾಲದ ತನಿಖೆ ನಡೆಸಿದರೂ ಇಡಿ ಯಾವುದೇ ಸಾಕ್ಷ್ಯವನ್ನು ದಾಖಲೆ ರೂಪದಲ್ಲಿ ನೀಡುವಲ್ಲಿ ವಿಫಲವಾಗಿದೆ.
ಇದನ್ನು ಓದಿದ್ದೀರಾ? 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯೂಸ್‌ಕ್ಲಿಕ್ ಸಂಪಾದಕ, ಎಚ್‌ಆರ್
ಸಂಬಂಧಿತ ಸಮಯದಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ಎಫ್‌ಡಿಐ ಸ್ವೀಕರಿಸಲು ಯಾವುದೇ ನಿರ್ಬಂಧಗಳಿರಲಿಲ್ಲ ಮತ್ತು ಹೂಡಿಕೆಯು ಆರ್ಥಿಕ ನಿರ್ಧಾರವಾಗಿದ್ದು ಯಾವುದೇ ಅಪರಾಧವನ್ನು ಎಸಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಾಗೆಯೇ ಸಂಬಳ, ಬಾಡಿಗೆ ಮತ್ತು ಸಲಹಾ ಶುಲ್ಕಗಳ ಮೂಲಕ ಹಣವನ್ನು ವಂಚಿಸಿದ ಆರೋಪಗಳು ಸಮರ್ಥನೀಯವಲ್ಲ ಎಂದೂ ಕೋರ್ಟ್ ಹೇಳಿದೆ.
ಈ ಎರಡು ಪ್ರಕರಣಗಳು ರದ್ದಾಗಿದ್ದರೂ, ಪ್ರಬೀರ್ ಪುರಕಾಯಸ್ಥ ಅವರ ವಿರುದ್ಧ ಯುಎಪಿಎ ಡಡಿಯಲ್ಲಿ ದಾಖಲಾಗಿರುವ ಪ್ರತ್ಯೇಕ ಭಯೋತ್ಪಾದನಾ ಪ್ರಕರಣವು ಇನ್ನೂ ವಿಚಾರಣಾ ಹಂತದಲ್ಲಿದೆ. ಸುಪ್ರೀಂ ಕೋರ್ಟ್ ಈ ಮೊದಲು ಅವರ ಯುಎಪಿಎ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ ಬಿಡುಗಡೆ ಮಾಡಲು ಆದೇಶಿಸಿತ್ತು.





