ಬೆಳಗಾವಿ ನಗರದ ಮಂಡೋಳಿ ರಸ್ತೆಯ ಭಾಗ್ಯದಯ ಬಡಾವಣೆಯಲ್ಲಿ ವಾಸವಾಗಿರುವ ವಕೀಲರಾದ ಪೂಜಾ ಸಂಜಯ ಕಾಕತ್ಕರ್ ಅವರ ಮನೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಏಪ್ರಿಲ್ 24ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ದುಷ್ಕರ್ಮಿಗಳು ಮನೆಯ ಮೊದಲ ಮಹಡಿಯ ಕಿಟಕಿಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆ ಸಮಯದಲ್ಲಿ ಕೋಣೆಯೊಳಗೆ ಅವರ ಮಗಳು ಓದುತ್ತಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಪಾರಾಗಿದ್ದಾರೆ.
ದಾಳಿಯಿಂದ ಮನೆಯ ಕಿಟಕಿಯ ಗ್ಲಾಸ್ ಮೇಲೆ ಗುಂಡಿನ ಪೈರಿಂಗ್ ಗುರುತುಗಳು ಕಂಡುಬಂದಿವೆ. ಘಟನೆ ನಂತರ ಸ್ಥಳಕ್ಕೆ ಪೊಲೀಸರು ಹಾಗೂ ಸುಕೋ (SOCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುಂಡು ತಗುಲಿದ ಗ್ಲಾಸ್ ಅನ್ನು ಫೊರೆನ್ಸಿಕ್ ಪರೀಕ್ಷೆಗಾಗಿ (FSL) ಕಳುಹಿಸಲಾಗಿದೆ.
ಕಳೆದ 18 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪೂಜಾ ಕಾಕತ್ಕರ್, ಹಲವು ಪ್ರಕರಣಗಳಲ್ಲಿ ವಾದ ಮಂಡಿಸುತ್ತಿದ್ದು, ವೃತ್ತಿ ಸಂಬಂಧಿತ ವೈಷಮ್ಯವೇ ದಾಳಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ




