ಕಳ್ಳತನ ಪ್ರಕರಣದ ಸಂಬಂಧ ಸವದತ್ತಿ ಮತ್ತು ರಾಮದುರ್ಗ ಪೋಲಿಸ್ ಠಾಣೆಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುನವಳ್ಳಿ ಗ್ರಾಮದ ಶಾಂತವ್ವ ಶಿವಾನಂದ ಸಿರನ್ನವರ ಅವರ ತೋಟದ ಮನೆಯಲ್ಲಿ ಫೆಬ್ರವರಿ 23ರಂದು ನಡೆದ ಕಳ್ಳತನ ಪ್ರಕರಣ ದಾಖಲಾದ ನಂತರ, ತನಿಖೆ ಕೈಗೊಂಡ ಪೊಲೀಸರು ಸವದತ್ತಿ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ಸಂಜು ದುಂಡಪ್ಪ ಬೋಳೆತ್ತಿನ ಮತ್ತು ಮಂಜುನಾಥ ಶೇಖಪ್ಪ ಹೊಂಗಲ ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹6.60 ಲಕ್ಷ ಮೌಲ್ಯದ ಬಂಗಾರ, ₹1.35 ಲಕ್ಷ ಬೆಲೆಬಾಳುವ ಬೆಳ್ಳಿಯ ಆಭರಣ ಹಾಗೂ ₹5 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹8 ಲಕ್ಷ ಮೌಲ್ಯದ ವಸ್ತುಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅದರ ಜೊತೆಗೆ, ಸವದತ್ತಿ ಠಾಣೆಯ 3 ಪ್ರಕರಣಗಳು ಮತ್ತು ಬೈಲಹೊಂಗಲ ಠಾಣೆಯ 1 ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳಾಗಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಳಗಾವಿ ಎಸ್‌ಪಿ, ಹೆಚ್ಚುವರಿ ಎಸ್‌ಪಿ, ರಾಮದುರ್ಗ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಸವದತ್ತಿ ಪಿಐ ಡಿ.ಎಸ್. ಧರ್ಮಟ್ಟಿ, ಪಿಎಸ್‌ಐ ಕಲ್ಮಶ ಬನ್ನೂರ, ಎಲ್.ಆರ್. ಗೌಡಿ ಮತ್ತು ಸಿಬ್ಬಂದಿ ಉದ್ದಪ್ಪ. ಎಚ್.ಪೂಜೇರಿ, ಅಮರ ಸಾರಾಪುರೆ, ಮಹೇಶ ಮಾಳಳ್ಳಿ, ಉಮೇಶ ಗಾಣಗಿ, ಎಂ.ಎಫ್. ಪಾಟೀಲ, ಎಲ್.ಪಿ. ಸುಣಧೋಳಿ, ವಿನೋದ ಟಕ್ಕಣ್ಣವರ, ಸಚಿನ ಪಾಟೀಲ ಹಲವರು ಯಶಸ್ವಿಯಾಗಿ ನಡೆಸಿದ್ದಾರೆ