ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಖಾನಾಪುರ- ಜಾಂಬೋಟಿ ರಸ್ತೆಯ ಶಿವಾಜಿನಗರ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಕಾಡಾನೆಯೊಂದು ಆಕಸ್ಮಿಕವಾಗಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಮೂಡಿಸಿತು.
ಶಿವಾಜಿನಗರದತ್ತ ಆನೆ ಸಂಚರಿಸುತ್ತಿರುವುದು ಗಮನಕ್ಕೆ ಬಂದ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆಯ ಎಸಿಎಫ್ ಸುನೀತಾ ನಿಂಬರಗ, ಆರ್‌ಎಫ್‌ಒ ಶ್ರೀಕಾಂತ್ ಪಾಟೀಲ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರ ಸಹಕಾರದೊಂದಿಗೆ ಆನೆಯನ್ನು ಸುರಕ್ಷಿತವಾಗಿ ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾದರು.
ಅರಣ್ಯ ಇಲಾಖೆಯ ತಕ್ಷಣದ ಕ್ರಮದಿಂದ ಶಿವಾಜಿನಗರ ಹಾಗೂ ಶೆಡೆಗಾಳಿ ಪ್ರದೇಶದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಇಲಾಖೆ ತಿಳಿಸಿದೆ.
ಇಂತಹ ಸಂದರ್ಭಗಳಲ್ಲಿ ನಾಗರಿಕರು ಎಚ್ಚರಿಕೆಯಿಂದಿದ್ದು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.




