ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ನದಿಗೆ ನೈವೇದ್ಯ ಬಿಡಲು ಹೋಗಿದ್ದ ವೇಳೆ ಕಾಲು ಜಾರಿ ಮಹಿಳೆ ನೀರಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ನೆಲೆಗೆ ತಂದಿದೆ.
ಮೃತ ಮಹಿಳೆ ಸಂಗೀತಾ ಶಿವಾಜಿ ಮಾಂಜ್ರಕರ (ವಯಸ್ಸು 40) ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಅವರ ಶವ ಇಂದು ಪತ್ತೆಯಾಗಿದೆ.
ಸಂಗೀತಾ ಅವರು ನೈವೇದ್ಯ ಹಾರಿಸಲು ಕೃಷ್ಣಾ ನದಿಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದರು. ಇದಾದ ಬಳಿಕ ಅವರು ನಾಪತ್ತೆಯಾಗಿದ್ದರು. ಈ ಕುರಿತು ತಕ್ಷಣವೇ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕದಳ, ಎಸ್.ಡಿ.ಆರ್.ಎಫ್ ಹಾಗೂ ಪೊಲೀಸರು ಚುರುಕಾಗಿ ಶೋಧ ಕಾರ್ಯ ಆರಂಭಿಸಿದ್ದರು.
ನಾಲ್ಕು ದಿನಗಳ ಕಠಿಣ ಶೋಧದ ಬಳಿಕ ಇಂದು ಮಾಂಜರಿ ಗ್ರಾಮದ ಬಳಿ ಒಂದು ಕಿ.ಮೀ ದೂರದ ನದಿತೀರದಲ್ಲಿ ಶವ ಪತ್ತೆಯಾಗಿದೆ.