ಓಕಳಿಯಲ್ಲಿ ದಲಿತ ಮಹಿಳೆಯರ ಮೇಲೆ ನೀರು ಎರಚಿದ್ದನ್ನು ಪ್ರಶ್ನಿಸಿದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ನಡೆದಿದೆ.
ಹನುಮಂತ ದೇವರ ಓಕಳಿಯಲ್ಲಿ ದಲಿತ ಮಹಿಳೆಯರ ಮೇಲೆ ಒತ್ತಾಯಪೂರ್ವಕ ನೀರು ಎರಚಿರುವ ಆರೋಪ ಇದ್ದು, ಇದನ್ನು ಪ್ರಶ್ನಿಸಿದ ಕುನ್ನಾಳ ಗ್ರಾಮದ ಲಕ್ಷ್ಮಣ್ ಮಾದರ ಎಂಬಾತನ ಮೇಲೆ ಹಾಗೂ ಮೂವರು ಮಹಿಳೆಯರ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಮೇಲ್ವರ್ಗದ ಜನರಿಂದ ದಲಿತ ಮಹಿಳೆಯರ ಮೇಲೆ ಓಕಳಿ ನೀರು ಎರಚಲಾಗಿದೆ ಎಂದು ಆರೋಪಿಸಲಾಗಿದೆ. ನೀರು ಎರಚಬೇಡಿ ಎಂದು ತಡೆಯಲು ಹೋದ ದಲಿತ ಯುವಕನ ಮೇಲೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆಯುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ತೀವ್ರ ಗಾಯಗೊಂಡ ಯುವಕನಿಗೆ ಗೋಕಾಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.