ಬಿಜೆಪಿ ಹೈಕಮಾಂಡ್ ಯತ್ನಾಳ್ ಉಚ್ಚಾಟನೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಕುರಿತು ಹೈಕಮಾಂಡ್‌ನ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಉಚ್ಚಾಟನೆ ವಾಪಸ್ ಪಡೆಯಲು ಮನವಿ ಮಾಡಲಾಗುವುದೆಂದು ತಿಳಿಸಿದರು.
“ನಮ್ಮ ಬೆನ್ನು ನಮಗೆ ಕಾಣುವುದಿಲ್ಲ. ನಮ್ಮಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ಯತ್ನಾಳ್ ಅವರ ಜೊತೆ ನಮ್ಮ ಇಡೀ ತಂಡ ಇದೆ. ನಾವೂ ಅವರನ್ನು ಬಿಟ್ಟಿಲ್ಲ,” ಎಂದು ಜಾರಕಿಹೊಳಿ ಹೇಳಿದರು.
ನಾಳೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಯತ್ನಾಳ್ ಅವರನ್ನು ಮನವೊಲಿಸಿ, ಹೈಕಮಾಂಡ್‌ಗೆ ಒಟ್ಟಾಗಿ ಮನವಿ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. “ಯತ್ನಾಳ್ ಉಚ್ಚಾಟನೆ ವಾಪಸ್ ಪಡೆಯುವ ವಿಶ್ವಾಸ ಇದೆ. ಒಗ್ಗಟ್ಟಿನಿಂದ ಪಕ್ಷವನ್ನು ಕಟ್ಟುತ್ತೇವೆ ಮತ್ತು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.