ಸೈಬರ್ ವಂಚನೆಗೆ ತುತ್ತಾಗಿ, 50 ಲಕ್ಷ ರೂ. ಕಳೆದುಕೊಂಡಿದ್ದ ವೃದ್ಧರೊಬ್ಬರು ತಮ್ಮ ಪತ್ನಿಯನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಸಮೀಪದ ಖಾನಾಪುರದಲ್ಲಿ ನಡೆದಿದೆ.
ಮೃತರನ್ನು ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಎಂದು ಗುರುತಿಸಲಾಗಿದೆ.
ಸೈಬರ್ ವಂಚಕರು ದಂಪತಿಗೆ ಬೆದರಿಕೆ ಕರೆ ಮಾಡಿದ್ದು, 50 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ತಮ್ಮ ಖಾತೆಗೆ ವರ್ಗಾಹಿಸಿಕೊಂಡಿದ್ದಾರೆ. ಅಲ್ಲದೆ, ಪದೇ-ಪದೇ ಹಣಕ್ಕಾಗಿ ಬೇಡಿಕೆ ಇಟ್ಟು, ಕಿರುಕುಳ ನೀಡಿದ್ದಾರೆ. ಪರಿಣಾಮ ದಂಪತಿಗಳು ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದರು ಎಂದು ಹೇಳಲಾಗಿದೆ.
ಡೆತ್ ನೋಟ್ ಬರೆದಿಟ್ಟಿರುವ ಡಯಾಗೋ ಸಂತಾನ್, ” ವ್ಯಕ್ತಿಯೊಬ್ಬರು ನಮಗೆ ಬೆದರಿಕೆ ಹಾಕಿದ್ದಾರೆ. ಸಿಮ್ ಕಾರ್ಡ್ ದುರುಪಯೋಗದ ಹೆಸರಿನಲ್ಲಿ ‘ಡಿಜಿಟಲ್ ಬಂಧನ’ ಮಾಡಲಾಗುತ್ತಿದೆ. ನಮ್ಮ ಬದುಕೇ ದುಸ್ತರವಾಗಿದೆ.ಗೋವಾದಲ್ಲಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿದ್ದೆವು. ಆ ಸಾಲದ ಹಣವನ್ನು ತಮ್ಮ ಆಸ್ತಿಗಳನ್ನು ಮಾರಿ ಮರುಪಾವತಿಸಬೇಕು” ಎಂದು ಹೇಳಿದ್ದಾರೆ.
ಡಯಾಗೋ ಅವರು ತಮ್ಮ ಪತ್ನಿಗೆ ವಿಷವುಣಿಸಿ, ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ಲೇವಿಯಾನಾ ಅವರ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ. ಡಿಯಾಗೋ ಅವರ ಮೃತದೇಹ ಮನೆಯ ನೀರಿನ ಟ್ಯಾಂಕ್‌ನಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಲೇದ್ ಹೇಳಿದ್ದಾರೆ.
ಮೃತದೇಹಗಳನ್ನು ಕಂಡ ನೆರೆಹೊರೆಯವರು ನಂದಗಡ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಬಂದು,ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.