ಬೆಳಗಾವಿ | ಧರ್ಮಾಂದತೆಯ ‘ದ್ವೇಷ’ದ ವಿಷವನ್ನು ಸೋಲಿಸಿದ ಮುಸ್ಲಿಮ್ ಶಿಕ್ಷಕನ ‘ಪ್ರೀತಿ’

Date:

Advertisements

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಹೂಲಿಕಟ್ಟಿ ಗ್ರಾಮ ಜಿಲ್ಲೆಯ ಹೃದಯಭಾಗದಲ್ಲಿರುವ ಚಿಕ್ಕ ಗ್ರಾಮ. ಸರ್ಕಾರಿ ಪ್ರಾಥಮಿಕ ಶಾಲೆಯೊಳಗೆ, ಕೆಲ ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ಮೂವರು ಕುಡಿಯುವ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಘಟನೆ ನಡೆದದ್ದು ಕೇವಲ ಒಂದು ಅಪರಾಧವಲ್ಲ, ಅದು ನಿಜವಾದ ಮಾನವೀಯತೆಯ ಮೇಲೆ ನಡೆದ ಘಾತಕ ದಾಳಿ.

ಒಬ್ಬ ನಿಷ್ಠಾವಂತ ಶಿಕ್ಷಕ, ಒಬ್ಬ ಮೃದು ಸ್ವಭಾವದ ವ್ಯಕ್ತಿ, ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುವ ಸುಲೇಮಾನ್ ಗೋರಿನಾಯಕ್ ಈ ಶಾಲೆಯ ಮುಖ್ಯ ಶಿಕ್ಷಕ. ಮಕ್ಕಳನ್ನು ಬಸ್ ನಿಲ್ದಾಣದವರೆಗೆ ಬಿಡುವ ಉತ್ಸಾಹ, ಅವರ ಇಷ್ಟದ ಆಹಾರವನ್ನು ತಂದು ಕೊಡುವ ಪ್ರೀತಿ, ಪಾಠಮಾಡುವ ಹೊಣೆಗಾರಿಕೆಯ ಹಿಂದೆ ಇರುವ ಅವಿರತ ಕಾಳಜಿ. ಆದರೆ ಸವದತ್ತಿಯ ಶ್ರೀರಾಮ ಸೇನೆಯ ಸಾಗರ ಪಾಟೀಲ್, ಕೃಷ್ಣಾ ಮಾದರ, ನಾಗನಗೌಡ ಪಾಟೀಲ್ ಎನ್ನುವ ಈ ಕೋಮು ಕ್ರಿಮಿಗಳ ಕಣ್ಣಿಗೆ ಇದ್ಯಾವುದೂ ಕಾಣಲಿಲ್ಲ. ಏಕೆಂದರೆ ಅವರು ಧರ್ಮಾಂದತೆಯ ಕತ್ತಲಿನಲ್ಲಿದ್ದವರು ಮುಖ್ಯ ಶಿಕ್ಷಕ ಮುಸ್ಲಿಂ ಎನ್ನುವ ಒಂದೇ ಕಾರಣಕ್ಕೆ ಶಾಲೆಯ ಮಕ್ಕಳ ಕುಡಿಯುವ ನೀರಿಗೆ ವಿಷ ಹಾಕಿ ಅಮಾನವೀಯ ಕೃತ್ಯದಿಂದ ಜೈಲು ಸೇರಿದ್ದಾರೆ. ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಹಾಕಲು, ದುಡ್ಡು ಕೊಟ್ಟು ಅಮಾಯಕ ವಿದ್ಯಾರ್ಥಿಯೋರ್ವನನ್ನು ಬಳಸಿಕೊಂಡಿರುವುದು ಅತ್ಯಂತ ವಿಷಾದನೀಯ ಸಂಗತಿ ಎಂದರೆ ತಪ್ಪಾಗಲಾರದು.

ಈ ಘಟನೆಯ ಕುರಿತು ಊರಿನ ಹಿರಿಯರಾದ ಸಿದ್ದಲಿಂಗಪ್ಪ ಈ ದಿನ.ಕಾಮ್ ಜತೆ ಮಾತನಾಡಿ, “ಸುಲೇಮಾನ್ ಸರ್ ಬಹಳ ಒಳ್ಳೆಯ ಮನುಷ್ಯ. ಮಕ್ಕಳು ಇಷ್ಟ ಪಟ್ಟಿದ್ದನೆಲ್ಲಾ ಮನೆಯಿಂದ ತಂದು ಕೊಡುತ್ತಾರೆ. ಶಾಲೆ ಬಿಟ್ಟ ನಂತರ ಶಾಲಾ ಮಕ್ಕಳನ್ನು ಬಸ್ ನಿಲ್ದಾಣದವರೆಗೂ ಬಂದು ಬಿಡುತ್ತಾರೆ. ಮಕ್ಕಳ ಮೇಲೆ ಅವರಿಗೆ ಬಹಳ ಕಾಳಜಿ. ಆದರೆ ಆ ಮೂವರು ಮಾಡಿದ ಕೆಲಸಕ್ಕೆ ಅವರಿಗೆ ಶಿಕ್ಷೆಯಾಗಬೇಕು” ಎಂದು ಹೇಳಿದರು.

Advertisements

“ಸುಲೇಮಾನ್ ಸರ್ ನಮ್ಮೂರ ಶಾಲೆಗೆ ನಂಬರ್ ಒನ್ ಶಿಕ್ಷಕರಾಗಿದ್ದಾರೆ” ಎನ್ನುವ ಹೂಲಿಕಟ್ಟಿ ಗ್ರಾಮದ ಕೆಂಚಪ್ಪ, “ಅವರ ಪಾಠ, ಅವರ ಶಿಸ್ತೂ, ಮಕ್ಕಳ ಮೇಲೆ ಇರುವ ಪ್ರೀತಿ ಇಡೀ ಊರಿಗೇ ಗೊತ್ತಿದೆ. ಇಂಥ ಒಳ್ಳೆಯ ಮನಸ್ಸಿನ ಶಿಕ್ಷಕರಿಗೆ ತೊಂದರೆ ಕೊಡುವ ದೃಷ್ಟಿಯಿಂದ ಸಣ್ಣ ಮಕ್ಕಳ ಕುಡಿಯುವ ನೀರಿನಲ್ಲಿ ವಿಷ ಹಾಕಿದ ಮೂವರು ಕಿಡಿಗೇಡಿಗಳು ಮಾನವೀಯತೆಯ ಶತ್ರುಗಳು” ಎಂದು ಕಿಡಿಕಾರಿದರು.

“ಅವರು ಮಾಡಿದ್ದು ಕ್ಷಮೆಗೆ ಅರ್ಹವಲ್ಲ. ಮಕ್ಕಳ ಜೀವದ ಜೊತೆಗೆ ಆಟವಾಡಿದವರು. ಸುಲೇಮಾನ್ ಸರ್ ಅವರ ಒಳ್ಳೆಯತನದಿಂದ ಯಾವುದೇ ಮಕ್ಕಳ ಪ್ರಾಣ ಹೋಗಿಲ್ಲ. ತಪ್ಪು ಮಾಡಿರುವ ಆ ಮೂವರಿಗೆ ಸರಿಯಾದ ಶಿಕ್ಷೆ ಆಗಲೇ ಬೇಕು. ಪೊಲೀಸರು ಸರಿಯಾದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಕೆಂಚಪ್ಪ ಅವರು ಮನವಿ ಮಾಡಿದರು.

ಹೂಲಿಕಟ್ಟಿ ಗ್ರಾಮದ ನಿವಾಸಿ, ಶಾಲೆಯ ವಿದ್ಯಾರ್ಥಿಯೋರ್ವರ ಪೋಷಕರೂ ಆಗಿರುವ ಪ್ರೇಮಾ ದ್ಯಾವನ್ನವರ ಅವರು ನಡೆದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ತಮ್ಮ ಆಂತರಿಕ ನೋವನ್ನು ಈ ದಿನ.ಕಾಮ್ ಜತೆ ಹಂಚಿಕೊಂಡರು.

ಶ್ರೀರಾಮ ಸೇನೆ
ನೀರಿಗೆ ವಿಷ ಹಾಕಿದ ಆರೋಪಿಗಳು ಶ್ರೀರಾಮ ಸೇನೆಯ ಕಾರ್ಯಕರ್ತರು

“ಆರೋಪಿಗಳು ಏನು ಉದ್ದೇಶ ಇಟ್ಟುಕೊಂಡಿದ್ದರೋ ಗೊತ್ತಿಲ್ಲ. ಆದರೆ ಸುಲೇಮಾನ್ ಸರ್ ಬಹಳ ಒಳ್ಳೆಯವ್ರು. ಮಕ್ಕಳನ್ನು ಪ್ರೀತಿಯಿಂದ ನೋಡ್ಕೋತಾರೆ. ಪಾಠ ಕಲಿಸುತ್ತಾ ಅವರ ಮನಸ್ಸು ಗೆಲ್ಲುವವರು. ಆದರೆ ಅಂದು ಏನಾಯ್ತು ಅಂತ ನಮಗೆ ಗೊತ್ತೇ ಇರಲಿಲ್ಲ. ಮಕ್ಕಳು ಅಸ್ವಸ್ಥರಾದಾಗ ನಮಗೆ ಶಂಕೆಯಾಯಿತು. ತಕ್ಷಣ ಅಂಬ್ಯುಲೆನ್ಸ್ ಕರೆದರು. ನಾವು ಕೂಡಾ ಹಾಸ್ಪಿಟಲ್‌ಗೆ ಓಡಿದ್ದೆವು. ಅಲ್ಲಿ ಕಣ್ಣೆದುರು ಮಕ್ಕಳು ತೊಂದರೆ ಪಡ್ತಿದ್ರು. ಇಷ್ಟು ಚಿಕ್ಕ ಮಕ್ಕಳು. ಅವರೇನು ತಪ್ಪು ಮಾಡಿರಲಿಲ್ಲ.” ಇಂಥ ಹೀನ ಕೃತ್ಯ ನಮ್ಮ ಊರಿನಲ್ಲಿ ಮರುಕಳಿಸಬಾರದು. ತಪ್ಪು ಮಾಡಿದವರು ಶಿಕ್ಷೆಗೆ ಒಳಗಾಗಲೇಬೇಕು” ಎಂದು ನಡೆದ ಘಟನೆಯನ್ನು ವಿವರಿಸಿದರು.

ಇದನ್ನು ಓದಿದ್ದೀರಾ? ಧರ್ಮಸ್ಥಳ | ಸಾಕ್ಷಿ ದೂರುದಾರನ ಮಾಹಿತಿ ಆಧರಿಸಿ ಬಾಹುಬಲಿ ಬೆಟ್ಟದ ಬಳಿ ಶೋಧಕ್ಕೆ ಮುಂದಾದ ಎಸ್‌ಐಟಿ

ನಮ್ಮ ಮಕ್ಕಳನ್ನು ಸುಲೇಮಾನ್ ಶಿಕ್ಷಕರು ತಾಯಿ ತಂದೆಗಿಂತ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಮಕ್ಕಳು ಕೇಳಿದ್ದನ್ನು ತಂದು ಕೊಡುತ್ತಾರೆ. ತಪ್ಪು ಮಾಡಿದ ಆರೋಪಿಗಳಿಗೆ ದೇವರೆ ಶಿಕ್ಷೆ ನೀಡುತ್ತಾನೆ ಎಂದು ಅದೇ ಊರಿನ ನಿವಾಸಿ ಬಸವ್ವ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕ ಸುಲೇಮಾನ್ ಗೋರಿನಾಯಕ್ ಅವರ ಹೆಸರು ಕೇಳಿದರೆ ಹೂಲಿಕಟ್ಟಿ ಗ್ರಾಮದಲ್ಲಿ ಪ್ರತಿಯೊಬ್ಬರ ಮಾತಿನಲ್ಲಿಯೂ ಗೌರವದ ಭಾವನೆಯೇ ಮೂಡುತ್ತದೆ. ಅವರು ಒಬ್ಬ ಶಿಕ್ಷಕ ಮಾತ್ರವಲ್ಲ, ಮಕ್ಕಳನ್ನು ಪೋಷಕರಂತೆ ನೋಡಿಕೊಳ್ಳುತ್ತಿದ್ದಾರೆ.

ಧರ್ಮವನ್ನು ಮೀರಿದ, ಮಮತೆಯ ಅರಿವಿನಿಂದ ಮಕ್ಕಳಿಗೆ ಬೆಳಕಾಗಿದ್ದಾರೆ. ಆದರೆ ಸಮಾಜದ ಕೆಲ ಭಾಗಗಳಲ್ಲಿ ಇನ್ನೂ ಇರುವ ಧರ್ಮಾಂಧತೆ, ಅಸಹಿಷ್ಣುತೆ, ಮತ್ತು ಕೋಮು ಭಾವನೆ ಉತ್ತಮ ವ್ಯಕ್ತಿಯ ಮೇಲೆ ದುಷ್ಟ ದೃಷ್ಟಿ ಹಾಕಲು ಕಾರಣವಾಯಿತು. “ಅವರು ಮುಸ್ಲಿಂ” ಎಂಬ ಕಾರಣಕ್ಕೆ ಅವರ ಸುತ್ತಲಿರುವ ಮಕ್ಕಳ ಜೀವಗಳನ್ನೇ ಗುರಿಯಾಗಿಸಿದ ಈ ಕೃತ್ಯ, ಕೇವಲ ನಾಚಿಕೆ ತಂದಿರುವುದಲ್ಲ, ಕಾನೂನು ಹಾಗು ನೈತಿಕತೆಯ ಅಡಿಪಾಯವನ್ನೇ ಸಡಿಲಗೊಳಿಸಿದೆ.

WhatsApp Image 2025 08 09 at 12.43.47 PM

ಇದು ಮನುಷ್ಯತ್ವದ ಹೃದಯಕ್ಕೆ ಇರಿದ ಚೂರಿಯಾಗಿದ್ದು. ಮಕ್ಕಳನ್ನು ಗುರಿಯಾಗಿಸಿದ ಇಂಥವರು ಕಾನೂನು ಶಿಕ್ಷೆಗೊಳಗಾಗಿ, ಸಮಾಜಕ್ಕೆ ಎಚ್ಚರವಾಗಲಿ. ಧರ್ಮದ ಹೆಸರಿನಲ್ಲಿ ಹುಟ್ಟುವ ದ್ವೇಷವನ್ನು, ಪ್ರೀತಿಯೇ ಸೋಲಿಸಲಿ.

ಹೂಲಿಕಟ್ಟಿ ಗ್ರಾಮದಲ್ಲಿ ನಡೆದ ಘಟನೆ ಒಂದು ಕೇವಲ ಅಪರಾಧವಲ್ಲ, ಅದು ಮಾನವೀಯತೆಯ ವಿರುದ್ಧದ ಕೃತ್ಯ. ಮಕ್ಕಳ ಕುಡಿಯುವ ನೀರಿಗೆ ವಿಷ ಹಾಕಿದ ಮೂವರು ಕಿಡಿಗೇಡಿಗಳು, ಮನುಷ್ಯತ್ವವನ್ನು ಹಿಂಸಿಸಿದವರು. ಇವರು ಮನುಷ್ಯರ ರೂಪದಲ್ಲಿರುವ ಕ್ರೂರಿಗಳು ಇವರಿಗೆ ಶಿಕ್ಷೆಯಾಗಲಿ ಧರ್ಮದ ಆಧಾರದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ನೀಚ ಬುದ್ಧಿಯ ಜನರಿಗೆ ಪಾಠವಾಗಲಿ ಎನ್ನುವುದು ಸ್ಥಳೀಯರು ಸೇರಿದಂತೆ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಕ್ ಮತ್ತು ಬಸ್ ನಡುವೆ ಅಪಘಾತ ಗರ್ಭಿಣಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠ ರಸ್ತೆಯಲ್ಲಿ ಬಸ್ ಮತ್ತು ಬೈಕ್...

ಬೆಳಗಾವಿ : ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ...

ಬೆಳಗಾವಿ : ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿಯ ಬಿಮ್ಸ್ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X