ಬೆಳಗಾವಿ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯೊಂದರಲ್ಲಿ ಐದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಹೃದಯವಿದ್ರಾವಕ ಘಟನೆ ಇದೀಗ ಎರಡು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ತುಫೇಲ್ ಅಹ್ಮದ್ ನಾಗರ್ಚಿ (22) ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ ಎಂಬ ಆರೋಪವಿದ್ದು, ಮಸೀದಿಯೊಳಗಿನ ಸಿಸಿಟಿವಿ ದೃಶ್ಯಾವಳಿ ಇದನ್ನು ದೃಢಪಡಿಸಿದೆ. 2023ರ ಅಕ್ಟೋಬರ್ 5ರಂದು ಘಟನೆ ನಡೆದಿದ್ದು, ಈಗ ಹೊರಬಿದ್ದಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಿಡಿ ಪ್ರಸಾರ:
ಘಟನೆಯ ಸಿಸಿಟಿವಿ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರು ತಮ್ಮ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಈ ವೇಳೆ ಬಾಲಕಿಯ ತಂದೆಯೊಬ್ಬರು ಅಡಿಯೋದಲ್ಲಿ ಈ ವಿಷಯ ಬಹಿರಂಗಪಡಿಸಿದ್ದ Audio Clip ಕೂಡ ವೈರಲ್ ಆಗಿದೆ.
ಎಸ್.ಪಿ. ಭೀಮಾಶಂಕರ ಗುಳೇದ್ ಸ್ಪಷ್ಟನೆ:
“ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಹಾಗೂ ಆಡಿಯೋ ಟಿಪ್ಪಣಿಗಳ ಆಧಾರದ ಮೇಲೆ, ಜಿಲ್ಲೆ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ತಂಡ ಗಮನ ಹರಿಸಿ ತನಿಖೆಗೆ ಮುಂದಾಗಿದೆ. ಮುರಗೋಡ ಠಾಣೆಯು ಮೂರು ವಿಶೇಷ ತಂಡ ರಚಿಸಿ ಆರೋಪಿಯನ್ನು ವಶಕ್ಕೆ ಪಡೆದಿದೆ,” ಎಂದು ಹೇಳಿದರು.
ಮಸೀದಿಯವರ ವಿರುದ್ಧ ನೇರ ಆರೋಪವಿಲ್ಲ:
“ಘಟನೆ ಮಸೀದಿಯಲ್ಲಿ ನಡೆದಿದ್ದರೂ, ಮಸೀದಿಯವರು ನೇರವಾಗಿ ಭಾಗಿಯಾಗಿಲ್ಲ. ಆದರೆ ಕೆಲವರು ರಾಜೀಪಂಚಾಯಿತಿ ನಡೆಸಿ ಪ್ರಕರಣ ಮುಚ್ಚಲು ಯತ್ನಿಸಿದ್ದರು. ಅವರನ್ನೂ ವಿಚಾರಣೆ ಮಾಡಲಾಗುತ್ತಿದೆ,” ಎಂದರು ಎಸ್.ಪಿ.
ಪೋಷಕರು ದೂರು ನೀಡಲು ನಿರಾಕರಿಸಿದ ಹಿನ್ನೆಲೆ:
ಪೋಷಕರು ದೂರು ನೀಡಲು ನಿರಾಕರಿಸಿದ ಕಾರಣದಿಂದಾಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಅಂಗನವಾಡಿ ಕಾರ್ಯಕರ್ತೆಯ ಮೂಲಕ ದೂರು ದಾಖಲಿಸಲಾಗಿದೆ. ಪ್ರಕರಣ 2024ರ ಜುಲೈ 1ರ ಮೊದಲು ನಡೆದ ಕಾರಣದಿಂದ ಐಪಿಸಿ (IPC) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.