ಬೆಳಗಾವಿ ನಗರದಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನಿರ್ಮಿಸಲು ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಆಡಳಿತ ಮಂಡಳಿಯ ಕರ್ನಾಟಕ ಸದಸ್ಯ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಟಿಟಿಡಿ ದೇವಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬೆಳಗಾವಿ ಬಾಲಾಜಿ ಟ್ರಸ್ಟ್ ಸುವರ್ಣ ಸೌಧದ ಎದುರು ಏಳು ಎಕರೆ ಜಾಗವನ್ನು ಖರೀದಿಸಿದ್ದು, ಅಲ್ಲಿ ಅಂದಾಜು ₹100 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಮುಂದಿನ ತಿಂಗಳಲ್ಲಿ ಟಿಟಿಡಿ ಸದಸ್ಯರು ಸ್ಥಳ ಪರಿಶೀಲನೆ ನಡೆಸಲಿದ್ದು, 2025ರ ಅಂತ್ಯದೊಳಗೆ ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ವೈಷ್ಣವ ಸಂಬಂಧಿ ದೇವಾಲಯಗಳಿಗೆ ನೆರವು ಒದಗಿಸುವ ಯೋಜನೆಯೂ ಇದೆ. ಜೀರ್ಣೋದ್ಧಾರ ಅಥವಾ ದೈನಂದಿನ ಪೂಜಾ ವಿಧಿವಿಧಾನಗಳಿಗೆ ಆರ್ಥಿಕ ನೆರವು ಅಗತ್ಯವಿರುವ ದೇವಾಲಯಗಳು ಟಿಟಿಡಿ ಮಂಡಳಿಗೆ ಮನವಿ ಸಲ್ಲಿಸಿದರೆ ಅಗತ್ಯ ನೆರವು ಒದಗಿಸಲಾಗುವುದು ಎಂದು ನರೇಶ್ ಕುಮಾರ್ ಹೇಳಿದರು.