ಬೆಳಗಾವಿ ನಗರದ ಹೊಸ ಗಾಂಧಿ ನಗರದಲ್ಲಿ ಬುಧವಾರ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮಣ್ಣು ಕುಸಿತಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮೂಡಲಗಿ ತಾಲೂಕಿನ ಪಟಗುಂಡಿ ಗ್ರಾಮದ ಬಸವರಾಜ ಸರವಿ (38) ಹಾಗೂ ಶಿವಲಿಂಗ ಸರವಿ (20) ಎಂದು ಗುರುತಿಸಲಾಗಿದೆ. ಈ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ನಡೆಸುತ್ತಿದೆ.
ಪೈ ರೆಸಾರ್ಟ್ ಹಿಂದಿನ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಲು ಮೊದಲಿಗೆ ಜೆಸಿಬಿ ಯಂತ್ರದ ಸಹಾಯದಿಂದ ಮಣ್ಣು ತೋಡಲಾಗಿತ್ತು. ನಂತರ ಆಳವಾಗಿ ಪೈಪ್ ಅಳವಡಿಸಲು ಬಸವರಾಜ ಹಾಗೂ ಶಿವಲಿಂಗ ಬಾವಿ ರೂಪದ ತೆರೆದ ಒಳಗೆ ಇಳಿದಿದ್ದರು. ಈ ವೇಳೆ ಅಚಾನಕ್ ಮೇಲಿನಿಂದ ಮಣ್ಣು ಕುಸಿಯಿತು. ಅವರು ಇಬ್ಬರೂ ಅದರಡಿ ಸಿಲುಕಿದ್ರು.
ಘಟನೆ ಕಣ್ಣೆದುರೆಯಾಗಿ ಕಂಡು ಬೆಚ್ಚಿಬಿದ್ದ ಸಹಕಾರ್ಮಿಕರು ಹಾಗೂ ಸುತ್ತಮುತ್ತಲಿನ ನಾಗರಿಕರು ಸಹಾಯಕ್ಕೆ ಮುಂದಾದರೂ, ಮತ್ತಷ್ಟು ಮಣ್ಣು ಕುಸಿಯುವ ಭೀತಿಯಿಂದ ಯಾರೂ ತಕ್ಷಣವೇ ಕೆಳಗೆ ಇಳಿಯಲಿಲ್ಲ. ಕೆಲ ಹೊತ್ತಿನ ನಂತರ ಜೆಸಿಬಿಯ ಮೂಲಕ ಮಣ್ಣು ತೆಗೆದು ಕಾರ್ಮಿಕರನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಘಟನೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂಬುದಾಗಿ ವೈದ್ಯರು ದೃಢಪಡಿಸಿದರು.
ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭದ್ರತೆ ಒದಗಿಸಿದರು ಹಾಗೂ ಜನರನ್ನು ನಿಯಂತ್ರಿಸಿದರು. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.