ಟ್ರೇಲರ್‌ನಿಂದ ಗಮನ ಸೆಳೆದಿದ್ದ ಬಳ್ಳಾರಿ ಭಾಗದ ವಿಭಿನ್ನ ಕಥಾಹಂದರ ಹೊಂದಿರುವ ʼಅಮರ ಪ್ರೇಮಿ ಅರುಣ್ʼ ಚಿತ್ರ ಈ ವಾರ (ಏ.25) ತೆರೆಗೆ ಬರಲು ಸಜ್ಜಾಗಿದೆ.
ʼಒಲವುʼ ಸಿನಿಮಾ ಲಾಂಛನದಲ್ಲಿ ಗೆಳೆಯರೇ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರ ಹೆಸರೇ ಸೂಚಿಸುವಂತೆ ಪ್ರೇಮ ಕಥೆ ಆಧಾರಿತ ಸಿನಿಮಾ. ಚಿತ್ರಕ್ಕೆ ಪ್ರವೀಣ್ ಕುಮಾರ್ ಜಿ ಬರವಣಿಗೆ ಹಾಗೂ ನಿರ್ದೇಶನವಿದೆ. ಚಿತ್ರದ ನಾಯಕನಾಗಿ ಹರಿಶರ್ವ ಹಾಗೂ ನಾಯಕಿಯಾಗಿ ದೀಪಿಕಾ ಆರಾಧ್ಯ ಅಭಿನಯಿಸಿದ್ದಾರೆ. ಧರ್ಮಣ್ಣ ಕಡೂರು, ಕ್ರಿತಿ ಭಟ್, ಮಹೇಶ್ ಬಂಗ್, ಅರ್ಚನಾ ಕೊಟ್ಟಿಗೆ, ರಂಜಿತಾ ಪುಟ್ಟಸ್ವಾಮಿ, ಮಂಜಮ್ಮ ಜೋಗತಿ, ರಾಧ ರಾಮಚಂದ್ರ, ಬಲ ರಾಜವಾಡಿ ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ. ಬಳ್ಳಾರಿ ಆಸುಪಾಸಿನಲ್ಲೇ ಚಿತ್ರೀಕರಣ ನಡೆದಿರುವ ಈ ಚಿತ್ರದ ಸಂಭಾಷಣೆ ಕೂಡ ಅಲ್ಲಿನ ಸೊಗಡಿನಲ್ಲೇ ಇರುತ್ತದೆ ಎನ್ನುವುದು ಟ್ರೇಲರ್‌ನಿಂದ ಈಗಾಗಲೇ ಗೊತ್ತಾಗಿದೆ.
ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಗೂ ಪ್ರವೀಣ್ ಕುಮಾರ್ ಅವರು ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಈಗಾಗಲೇ ಜನಪ್ರಿಯವಾಗಿದೆ. ಪ್ರವೀಣ್ ಎಸ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಮಂಡ್ಯ ಮಂಜು ಕಾರ್ಯನಿರ್ವಹಿಸಿದ್ದಾರೆ.