ಬರುವ ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.
ಜಿಲ್ಲಾಧಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಅಖಂಡ ಬಳ್ಳಾರಿಯಲ್ಲಿ ಈಗಾಗಲೇ 5 ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈ ಬಾರಿ 67 ವರ್ಷಗಳ ಬಳಿಕ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳೆರಡೂ ಜಂಟಿಯಾಗಿ ಸಮ್ಮೇಳನ ನಡೆಸಲಿವೆ. ಡಿಸೆಂಬರ್ ತಿಂಗಳಲ್ಲಿ ವಾತಾವರಣ ಮತ್ತು ಹವಮಾನವು ಊತ್ತಮವಾಗಿರುವುದರಿಂದ ಆಯೋಜನೆಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ. 3 ದಿನಗಳ ಕಾರ್ಯಕ್ರಮ ಆಯೋಜಿಸಲಾಗುವುದು. ಶಾಸಕರು ಹಾಗೂ ಸಚಿವರೊಂದಿಗೆ ಚರ್ಚಿಸಿ ಸಮ್ಮೇಳನದ ದಿನಾಂಕ ನಿರ್ಧರಿಸಲಾಗುವುದು” ಎಂದರು.
“ಹಲವು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಆಯೋಜನೆಯಾಗುತ್ತಿರುವ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಬಳ್ಳಾರಿಯಲ್ಲಿ ಮೊದಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸರ್ ಥಾಮಸ್ ಮನ್ರೋ ಅವರ ಕುಟುಂಬಸ್ಥರು ಆಗಮಿಸಲಿದ್ದಾರೆ. ಇಂದಿನ ಪೀಳಿಗೆಗೆ ಮತ್ತು ಯುವಸಮುದಾಯಕ್ಕೆ ಕನ್ನಡ ಸಾಹಿತ್ಯದ ಬಗೆಗಿನ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ” ಎಂದರು.
“ಈ ಸಮ್ಮೇಳನವು ಕನ್ನಡಿಗರ ಶೈಕ್ಷಣಿಕ ಮತ್ತು ಔದ್ಯೋಗಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ್ದಾಗಲಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಅನ್ನದ ಭಾಷೆ ಆಗಬೇಕು. ಇದರ ಕುರಿತ ಮೌಲ್ಯಾಧಾರಿತ ಚರ್ಚೆಗಳು ನಡೆಯಲಿವೆ. ಹಾವೇರಿ ಸಮ್ಮೇಳನದಲ್ಲಿ ಕೈಗೊಂಡಿದ್ದ ಸಮಗ್ರ ಕನ್ನಡ ಭಾಷಾ ವಿಧೇಯಕ ಜಾರಿಯ ನಿರ್ಣಯವನ್ನು ಸರ್ಕಾರ ಸಾಕಾರಗೊಳಿಸಿದೆ” ಎಂದು ಹೇಳಿದರು.
ಇದನ್ನೂ ಓದಿ: ಬಳ್ಳಾರಿ | ನೋಟಿಸ್ ನೀಡದೆ ಮನೆ ತೆರವು; ಪ್ರತಿಭಟನೆ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ ಜೆ ಶೋಭಾರಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.